ಶಕ್ತಿಶಾಲಿ ರಾಕೆಟ್ ಇಂಜಿನ್ ಪರೀಕ್ಷಿಸಿದ ಇಸ್ರೋ

ಚೆನ್ನೈ, ಜು.೩- ಬ್ಯಾಹ್ಯಾಕಾಶ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಗತಿ ಸಾಧಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇಸ್ರೋ ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.
ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ (ಐಪಿಆರ್‌ಸಿ)ನಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸುವ ಮೂಲಕ ಬ್ಯಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಗುರಿ ಸಾಧಿಸಿದೆ. ಸೆಮಿ ಕ್ರಯೋಜೆನಿಕ್ ಎಂಜಿನ್ ಎಂದು ಕರೆಯಲ್ಪಡುವ ಇದು ಒಂದು ರೀತಿಯ ಪ್ರೊಪಲ್ಷನ್ ತಂತ್ರಜ್ಞಾನವಾಗಿದ್ದು, ವಿಶೇಷ ರೀತಿಯಲ್ಲಿ ಸಂಸ್ಕರಿಸಿದ ಸೀಮೆಎಣ್ಣೆ ಮತ್ತು ಶೀತಲೀಕರಿಸಿದ ದ್ರವ ಆಮ್ಲಜನಕದಿಂದ ಚಾಲಿತವಾಗಿದೆ. ಮುಖ್ಯವಾಗಿ ಈ ಸೆಮಿ-ಕ್ರಯೋ ಎಂಜಿನ್ ಅನ್ನು ಕೇರಳದ ತಿರುವನಂತಪುರಂನ ವಲಿಮಾಲಾದಲ್ಲಿನ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ)ನಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇಸ್ರೋ ಈ ಶಕ್ತಿಶಾಲಿ ರಾಕೆಟ್ ಇಂಜಿನ್‌ನ ಹಲವು ಬಾರಿಗೆ ಪರೀಕ್ಷೆ ನಡೆಸಲಿದ್ದು, ಆ ಬಳಕಿವಷ್ಟೇ ಪೂರ್ಣ ಪ್ರಮಾಣದ ಅರ್ಹತೆ ಪ್ರಮಾಣ ನೀಡಲಾಗುವುದು. ಒಂದು ವೇಳೆ ಇದು ಸಾಕಾರಗೊಂಡರೆ ಅದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಲಿದೆ. ಸದ್ಯ ಉಡಾವಣೆ ವಾಹನ ಮಾರ್ಕ್ ೩ (ಎಲ್‌ವಿಎಮ್೩) ನಲ್ಲಿ ಎಲ್೧೧೦ (ದ್ರವ-ಇಂಧನ ಕೋರ್ ಹಂತ) ಇಂಜಿನ್ ಅನ್ನು ಬಳಸಲಾಗುತ್ತಿದೆ. ಸದ್ಯ ಪರೀಕ್ಷಿಸಲಾಗಿರುವ ೨೦೦ ಕಿಲೋ ನ್ಯೂಟನ್ ಥ್ರಸ್ಟ್‌ನ ಶಕ್ತಿಶಾಲಿ ಇಂಜಿನ್ ಮುಂದಿನ ಎಲ್ಲಾ ಹಂತಗಳಲ್ಲಿ ತೇರ್ಗಡೆ ಹೊಂದಿದರೆ ಸದ್ಯ ಮಾರ್ಕ್ ೩ (ಎಲ್‌ವಿಎಮ್೩) ನಲ್ಲಿ ಬಳಸಲ್ಪಡುವ ಎಲ್೧೧೦ರ ಬದಲಿಗೆ ಬಳಸಲಾಗುತ್ತದೆ. ಸದ್ಯ ದಕ್ಷಿಣ ಭಾರತದಲ್ಲಿನ ಐಪಿಆರ್‌ಸಿ (ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್) ಯು ಸುಮಾರು ಬರೊಬ್ಬರಿ ೨೬೦೦ ಕಿಲೋ ನ್ಯೂಟನ್ ಥ್ರಸ್ಟ್‌ವರೆಗಿನ ಅರೆ-ಕ್ರಯೋಜೆನಿಕ್ ಎಂಜಿನ್‌ಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.