ಶಂಭಾ ಅವರ ಕೊಡುಗೆ ಅಪಾರ: ಭಗವತಿ


ಧಾರವಾಡ ಜ.5: ಶಂಬಾ ಅವರು ಶ್ರೇಷ್ಠ ಸಂಶೋಧಕರಷ್ಟೇ ಅಲ್ಲ, ಮೂಲತಃ ಸಾಂಸ್ಕøತಿಕ ಅಧ್ಯಯನಕಾರರಾಗಿದ್ದರು. ವಿಚಾರವೆ ಜೀವನದ ಬೆಳಕು ಎಂಬ ಪ್ರಜ್ಞೆ ಹೊತ್ತು, ಸತ್ಯದ ಹುಡುಕಾಟದಲ್ಲಿ ವಿಚಾರದ ಬೆಳಕನ್ನು ತೋರಿದವರು. ತಾವು ಕೈಕೊಂಡ ಪ್ರತಿಯೊಂದು ಕಾರ್ಯದಲ್ಲಿಯೂ ಸ್ವಂತಿಕೆಯನ್ನು ಉಳಿಸಿಕೊಂಡವರು ಎಂದು ಬೈಲಹೊಂಗಲ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಸರಸ್ವತಿದೇವಿ ಎಸ್. ಭಗವತಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಡಾ. ಶಂಭಾ ಜೋಶಿ ದತ್ತಿ ಅಂಗವಾಗಿ, ಕನ್ನಡ ಭಾಷಾ ಸಂಶೋಧನಾ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಶಂಬಾ ಅವರ ಸಂಸ್ಕøತಿ ಚಿಂತನೆ’ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ಶಂಬಾ ಜೋಶಿಯವರು ಸಂಸ್ಕøತಿಯ ಅಧ್ಯಯನವನ್ನು ಭಾಷಾಶಾಸ್ತ್ರ, ಮನಃಶಾಸ್ತ್ರ, ಜೀವಶಾಸ್ತ್ರ, ಪುರಾತತ್ವಶಾಸ್ತ್ರ, ಇತಿಹಾಸಶಾಸ್ತ್ರ, ದೈವತಾಶಾಸ್ತ್ರ ಹೀಗೆ ಹಲವಾರು ಜ್ಞಾನಶಾಸ್ತ್ರಗಳ ನೆರವಿನಿಂದ, ಆಳವಾದ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು. ಜನರಿಗೆ ವೈಚಾರಿಕ ನೋಟವೇ ಇಲ್ಲದ ಕಾಲದಲ್ಲಿ ವೈಚಾರಿಕತೆಯ ನೋಟವನ್ನು ನೀಡಿದವರು. ಭಾಷೆ ಹುಟ್ಟಲು ಬುದ್ದಿ ಕಾರಣವಾಗಿರದೇ ಪ್ರಜ್ಞೆ ಕಾರಣವಾಗಿದೆ ಎಂಬ ಸಂಗತಿಯನ್ನು ಶಂಬಾರವರು ಸ್ಪಷ್ಟವಾಗಿ ಖಚಿತಪಡಿಸಿದವರು, ಆಚಾರ-ವಿಚಾರಗಳನ್ನು ಬುದ್ದಿಗೆ ಅಧೀನಗೊಳಿಸಿ ಬಾಳಿದರೆ ಎಂತಹ ಆಶಯಗಳು ರೂಪುಗೊಳ್ಳುತ್ತವೆ ಎಂಬುದನ್ನು ಐನ್‍ಸ್ಟಿನ್ ಮತ್ತು ರಸೆಲರ್ ಪರಿಭಾಷಾ ಸೂತ್ರದಿಂದ ನಿರೂಪಿಸಿದವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸರಕಾರದ ಸಂಸ್ಕøತಿ ಮಂತ್ರಾಲಯದ ತಜ್ಞ ಸದಸ್ಯ, ಹಿರಿಯ ರಂಗಕರ್ಮಿ, ಧಾರವಾಡ ಆಕಾಶವಾಣಿಯ ಡಾ. ಶಶಿಧರ ನರೇಂದ್ರ ಅವರು ಮಾತನಾಡಿ, ಗೋಕಾಕ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಶಂಬಾರವರು ನಾಡು ನುಡಿಯ ಅಭಿವೃದ್ಧಿಗಾಗಿ ಕ್ರಿಯಾಶೀಲರಾಗಿದ್ದವರು. ಕರ್ನಾಟಕ ಏಕೀಕರಣಕ್ಕೂ ಇವರ ಕೊಡುಗೆ ಇದೆ. ತಮ್ಮ ಆರೂವರೆ ದಶಕಗಳ ಸಂಸ್ಕøತಿ ಅಧ್ಯಯನದಲ್ಲಿ ಕಂಡರಸಿದ ಸಂಗತಿಗಳು ಇಂದಿಗೂ ಸಂಸ್ಕøತಿ ಶೋಧದ ಮಹತ್ವದ ಚರ್ಚೆಗಳಾಗಿವೆ. ಧರ್ಮ, ತತ್ವ, ಸಾಹಿತ್ಯ, ಶಾಸ್ತ್ರಗಳ ಬೆಳಕಿನಲ್ಲಿ ಕನ್ನಡದ ಕರ್ನಾಟಕ ಸಂಸ್ಕøತಿಯ ಜನಾಂಗಿಕ, ಭೌಗೋಳಿಕ, ಚಾರಿತ್ರಿಕ ಮತ್ತು ಭಾಷಿಕ ಇತಿಹಾಸದ ಅಗೋಚರ ಆಯಾಮಗಳನ್ನು ಬೆಳಕಿಗೆ ತಂದಿದ್ದಾರೆ ಎಂದರು.
ಮಾನವ ಧರ್ಮ ಪ್ರತಿಷ್ಠಾನದ ಕಾರ್ಯದರ್ಶಿ ವ್ಹಿ. ಜಿ. ಭಟ್ ದತ್ತಿ ಉದ್ದೇಶ, ದತ್ತಿ ಆಶಯ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ದಿ. ಡಾ. ಶಂಬಾ ಜೋಶಿಯವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಗೌರವ ಸಲ್ಲಿಸಲಾಯಿತು. ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ) ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿಯವರು ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ನಿರೂಪಿಸಿದರು. ಮಹಾಂತೇಶ ನರೇಗಲ್ಲ ವಂದಿಸಿದರು. ಪ್ರಾರಂಭದಲ್ಲಿ ವಸಂತಲಕ್ಷ್ಮೀ ಹೊನ್ನಿಗನೂರ ಪ್ರಾರ್ಥಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಬ. ಗಾಮನಗಟ್ಟಿ, ಶಂಕರ ಕುಂಬಿ ಹಾಗೂ ಡಾ. ಲಿಂಗರಾಜ ಅಂಗಡಿ, ವೀರಣ್ಣ ಒಡ್ಡೀನ, ಶ್ರೀಮತಿ ವ್ಹಿ.ಜಿ. ಭಟ್, ಮತ್ತು ಶಂಬಾ ಅವರ ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.