ಶಂಕ್ರಯ್ಯ ಸ್ವಾಮಿಗಳು ನೈಜ ನಿಜಜಂಗಮರಾಗಿದ್ದಾರೆ:ನಾಗಠಾಣ ಶ್ರೀಗಳು

ವಿಜಯಪುರ,ಜ.16:”ಆಧ್ಯಾತ್ಮಿಕ ಪ್ರವಚನದ ಮೂಲಕ ಭಾವೈಕ್ಯತೆಯನ್ನು, ಕೌಟುಂಬಿಕ ಮೌಲ್ಯಗಳನ್ನು ಬಿತ್ತರಿಸಿದವರು ಶಂಕ್ರಯ್ಯ ಸ್ವಾಮಿಗಳು. ಧಾರ್ಮಿಕ, ಸಾಮಾಜಿಕ, ಸಾಂಸ್ಕøತಕವಾಗಿ ಅಪಾರ ಕೊಡುಗೆ ನೀೀಡಿದ ಶಂಕ್ರಯ್ಯ ಸ್ವಾಮಿಗಳ ಕುರಿತು ರಚನೆಯಾದ ನಿಜಜಂಗಮ ಅಭಿನಂದನಾ ಕೃತಿ ಅರ್ಥಪೂರ್ಣ ಹಾಗೂ ಮೌಲಿಕ ಕೃತಿಯಾಗಿದೆ” ಎಂದು ನಾಗಠಾಣ ಉದಯಲಿಂಗೇಶ್ವರ ಹಿರೇಮಠದ ಪೂಜ್ಯ ಮ.ಘ.ಚ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಿಕೋಟಾ ತಾಲೂಕಿನ ತಾಜಪೂರ (ಎಚ್). ತೋಟದ ಆಶ್ರಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಹಮ್ಮಿಕೊಂಡ ಶ್ರೀ ವೇ.ಮೂ.ಪಂ. ಶಂಕರಯ್ಯ ಮಹಾಸ್ವಾಮಿಗಳವರ ‘ನಿಜಜಂಗಮ’ ಅಭಿನಂದನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ದಣಿವರಿಯದ ಸಮಾಜ ಸೇವೆಯಿಂದ ಮಾನವ ಮಹಾದೇವನಾಗುತ್ತಾನೆ. ನಮ್ಮಲ್ಲಿರುವ ಉತ್ತಮ ಗುಣಗಳೇ ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತವೆ. ಶಂಕ್ರಯ್ಯ ಸ್ವಾಮಿಗಳು ಅಖಂಡ 85 ವರ್ಷ ಕರ್ನಾಟಕ-ಮಹಾರಾಷ್ಟ್ರ ತುಂಬೆಲ್ಲಾ ಪುರಾಣ-ಪ್ರವಚನದಿಂದ ಭಕ್ತರನ್ನು ಉದ್ಧರಿಸಿದರು. ಹೋದಲ್ಲೆಲ್ಲ ಭಕ್ತರಿಗೆ ಲಿಂಗಧಾರಣೆ ಮತ್ತು ಪೂಜಾ ವಿಧಾನಗಳನ್ನು ಹೇಳಿಕೊಡುವ ಪೂಜ್ಯರು ನಿಜಜಂಗಮರೇ ಸರಿ” ಎಂದರು.

ನಿಜಜಂಗಮ ಅಭಿನಂದನ ಗ್ರಂಥವನ್ನು ಪರಿಚಯಿಸಿದ ಬಬಲೇಶ್ವರ ಶ್ರೀ ಶಾಂತವೀರ ಪ.ಪೂ. ಕಾಲೇಜಿನ ರಾಜ್ಯಪ್ರಶಸ್ತಿ ಪುರಸ್ಕøತ ಪ್ರೊ. ಮಹಾದೇವ ರೆಬಿನಾಳ ಮಾತನಾಡಿ, “ಯಾವುದೇ ಮಹತ್ಕಾರ್ಯಗಳು ಜರುಗಬೇಕಾದರೆ ಸದ್ಗುರುವಿನ ಕೃಪೆ ಮುಖ್ಯವಾದುದು. ಈ ಗ್ರಂಥದಲ್ಲಿ ಪೂಜ್ಯ ಮಡಿವಾಳಯ್ಯನವರ ಚರಿತ್ರೆ, ಶ್ರೀ ಶಂಕ್ರಯ್ಯ ಸ್ವಾಮಿಗಳ ಚರಿತ್ರೆ, ಜಿಲ್ಲೆಯ ವಿವಿಧ ಮಠಗಳ ಪರಿಚಯ, ಮಠದಲ್ಲಿ ನಡೆದ ಧರ್ಮಸಭೆ ಮತ್ತು ಶ್ರೀಗಳ ಕುರಿತು ಭಕ್ತರ-ಅನುಯಾಯಿಗಳ ನುಡಿಗಳು ಮುಂತಾದ ಭಾಗಗಳ ಮೂಲಕ ಗ್ರಂಥ ಅರ್ಥಪೂರ್ಣವಾಗಿ ಮೂಡಿಬಂದಿದೆ. ಯಾರ್ಯಾರದೋ ಗ್ರಂಥ ಬರೆಯುವುದಕ್ಕಿಂತ ಲೋಕಮಾನ್ಯ ಪುಣ್ಯ ಪುರುಷರ ಅಭಿನಂದನಾ ಗ್ರಂಥಗಳು ಮೂಡಿ ಬಂದಾಗ ಸಮಾಜಕ್ಕೆ ದಾರಿದೀಪವಾಗುತ್ತವೆ. ದಾಶ್ಯಾಳ-ತಾಜಪುರ ಗ್ರಾಮ ಮತ್ತು ಸುತ್ತಮುತ್ತಲೂ ಸಾಮರಸ್ಯ, ಕೃಷಿ ಸುಧಾರಣೆ, ಆಧ್ಯಾತ್ಮಿಕ ಭಾವ-ಚಿಂತನೆಗಳನ್ನು ಬಿತ್ತುತ್ತಿರುವ ಪೂಜ್ಯರು ಪ್ರಾಥಃಸ್ಮರಣಿಯರಾಗಿದ್ದಾರೆ” ಎಂದರು.

ಗ್ರಂಥದ ಪ್ರಧಾನ ಸಂಪಾದಕ ಡಾ. ವಿ.ಡಿ. ಐಹೊಳ್ಳಿ ಮಾತನಾಡಿ, ಉದಯೋನ್ಮುಖ ಬರಹಗಾರರು, ಲೇಖಕರು ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಸಂಬಂಧ ಬೆಸೆದವರ ಕುರಿತು ಬರೆಯಲು ಪ್ರಯತ್ನಿಸಬೇಕು. ಅಭಿನಂದನ ಗ್ರಂಥ ಸಾಹಿತ್ಯದ ಒಂದು ಭಾಗ. ಶಂಕ್ರಯ್ಯ ಸ್ವಾಮಿಗಳು ಪ್ರವಚನದ ಮೂಲಕ ಕಾಯಕ, ದಾನ, ದಾಸೋಹಗಳಿಗೆ ಪ್ರೇರೆಪಣೆ ನೀಡಿದರು. ಕಾಯಕದಲ್ಲಿಯೇ ಕೈಲಾಸ ಕಂಡ ಶ್ರೀಗಳ ಕೃತಿ ಮುಧೋಳದ ಮೃತ್ಯುಂಜಯ ಸ್ವಾಮಿಗಳ ಅಭಿನಂದನ ಗ್ರಂಥದಂತೆ ನಿಜಜಂಗಮ ಕೃಷಿ ಕೂಡ ಮಹತ್ವ ಪೂರ್ಣತೆಯಿಂದ ಕೂಡಿದೆ ಎಂದರು.

ಗ್ರಂಥವನ್ನು ಲೋಕಾರ್ಪಣೆಗೊಳಿಸಿದ ಕನ್ನೂರ ಹಿರೇಮಠದ ಪೂಜ್ಯ ಷ.ಬ್ರ. ಸೋಮನಾಥ ಶಿವಾಚಾರ್ಯರು ಮಾತನಾಡಿ, ಎಳ್ಳ ಅಮವಾಸ್ಯೆ ಹಾಗೂ ಲಿಂ. ಮಡಿವಾಳೇಶ್ವರ, ಲಿಂ. ಮಳೆಮ್ಮತಾಯಿಯವರ ಸ್ಮರಣೋತ್ಸವ ಪ್ರಯುಕ್ತ ಮಠದಲ್ಲಿ ಪ್ರತಿವರ್ಷ ಧರ್ಮಗೊಷ್ಠಿ ಸಾಧಕರಿಗೆ ಸನ್ಮಾನ ಸಾಂಸ್ಕøತಿಕ ಕಾರ್ಯಕ್ರಮಗಳ ಶಂಕರಯ್ಯ ಸ್ವಾಮಿಗಳು ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ. ಸಂಸಾರದಲ್ಲಿದ್ದುಕೊಂಡು ಪಾರಮಾರ್ಥವನ್ನು ಸಾಧಿಸಿದ ಶ್ರೀಗಳು ಹಣಕ್ಕೆ ಬೆಲೆಕೊಡದೆ ಜನರ ಭಾವನೆಗಳಿಗೆ ಮನಸೋತವರು. ಅವರ ಇಡಿ ಜೀವನ ಸಾಧನೆಗಳನ್ನು ನಿಜಜಂಗಮ ಗ್ರಂಥದಲ್ಲಿ ಸೆರೆ ಹಿಡಿದ ಸಂಪಾದಕರ ಹಾಗೂ ಗ್ರಂಥ ದಾನಿಗಳ ಶ್ರಮ ಸಾರ್ಥಕವಾಗಿದೆ ಎಂದರು.

ತಡವಲಗಾ ಹಿರೇಮಠದ ಷ.ಬ್ರ. ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಮಮದಾಪೂರ ವಿರಕ್ತಮಠದ ಮ.ನಿ.ಪ್ರ. ಅಭಿನವ ಮುರುಘೆಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೊನವಾಡದ ಬಾಬುರಾವ ಮಹಾರಾಜರು, ಮುಖಂಡರಾದ ಆರ್.ಜಿ. ಯರನಾಳ, ಗುರುಲಿಂಗಪ್ಪ ಅಂಗಡಿ, ಡಾ. ಸುರೇಶ ಬಿರಾದಾರ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ವಿಜಯಪುರದ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಸದಸ್ಯರು ಹಾಗೂ ಭಕ್ತರು 85 ವರ್ಷ ತುಂಬಿದ ಶಂಕರಯ್ಯ ಸ್ವಾಮಿಗಳಿಗೆ ತುಲಾಭಾರ ಗೌರವ ಸಮರ್ಪಿಸಿದರು. ಗ್ರಂಥ ದಾನಿಗಳನ್ನು, ಹಾಗೂ ಸಂಪಾದಕ ಮಂಡಳಿಯನ್ನು ಸನ್ಮಾನಿಸಿದರು.

ಕುಮಾರಿ ಸಹನಾ ಕುಲಕರ್ಣಿ ಹಾಗೂ ಲಕ್ಷ್ಮೀ ನಾಯಕ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಚಾಲಕ ಡಾ. ಮಳಿಸ್ವಾಮಿ ಹಿರೇಮಠ ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಶರಣಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಸುಭಾಸಚಂದ್ರ ಕನ್ನೂರ ನಿರೂಪಿಸಿದರು. ಡಾ. ಮಾಧವ ಗುಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಅಪ್ಪಾಸಾಹೇಬ ಯರನಾಳ, ಜಗದೀಶ ಹಿರೇಮಠ, ಡಾ. ಸವಿತಾ ಝಳಕಿ, ಡಾ. ಎನ್. ಎಸ್. ಮಾಗಣಗೇರಿ, ವಿಜಯಲಕ್ಷ್ಮಣಿ ಹಿರೇಮಠ ಹಾಗೂ ದಾಶ್ಯಾಳ, ತಾಜಪೂರ, ಮುಚ್ಚಂಡಿ ಗ್ರಾಮದ ಸದ್ಭಕ್ತರು ಉಪಸ್ಥಿತರಿದ್ದರು.