ಶಂಕಿತ ೩ ಮಂದಿ ಉಗ್ರರ ನಿವಾಸದ ಮೇಲೆ ಎನ್‌ಐಎ ದಾಳಿ

ಪಾಟ್ನಾ, ಜು.೨೮- ಬಿಹಾರ ರಾಜಧಾನಿ ಪಾಟ್ನಾದಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯನ್ನು ಪ್ರಾರಂಭಿಸಿದೆ.

ಮೂವರು ಶಂಕಿತ ಭಯೋತ್ಪಾದಕರಾದ ನೂರುದ್ದೀನ್, ಸನಾವುಲ್ಲಾ ಮತ್ತು ಮುಸ್ತಕೀಮ್ ಅವರ ಮನೆಗಳ ಮೇಲೆ ಗುರುವಾರ ದಾಳಿ ನಡೆಸಿದೆ.

ಮುಂಜಾನೆಯಿಂದಲೇ ಎನ್‌ಐಎಯ ಮೂರು ತಂಡಗಳು ನೂರುದ್ದೀನ್, ಸನಾವುಲ್ಲಾ ಮತ್ತು ಮುಸ್ತಕೀಮ್ ಗ್ರಾಮಗಳಲ್ಲಿ ಹಾಜರಿದ್ದು, ಶೋಧ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಮೂವರು ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ನ ಸಕ್ರಿಯ ಸದಸ್ಯರಾಗಿದ್ದು, ಈ ಮೂವರಲ್ಲಿ ನೂರುದ್ದೀನ್ ಇತ್ತೀಚೆಗೆ ಲಕ್ನೋದಲ್ಲಿ ಬಂಧನಕ್ಕೊಳಗಾಗಿ ಪಾಟ್ನಾದ ಜೈಲಿನಲ್ಲಿದ್ದಾನೆ. ಆದರೆ ಸನಾವುಲ್ಲಾ ಮತ್ತು ಮುಸ್ತಕೀಂ ಸದ್ಯ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಟ್ನಾ ಟೆರರ್ ಮಾಡ್ಯೂಲ್ ಪ್ರಕರಣವನ್ನು ಪಾಟ್ನಾ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸುವಂತೆ ಗೃಹ ಸಚಿವಾಲಯ ಇತ್ತೀಚೆಗೆ ಆದೇಶ ನೀಡಿತ್ತು.
ಈ ಸಂಬಂಧ ಸುಮಾರು ೨೬ ಶಂಕಿತ ಭಯೋತ್ಪಾದಕರು ಹಾಗೂ ಪಿಎಫ್?ಐ ಸದಸ್ಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದ, ಪೊಲೀಸರು ಇದುವರೆಗೆ ಐವರನ್ನು ಬಂಧಿಸಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.

ಜುಲೈ ೧೪ ರಂದು ಅಥರ್ ಪರ್ವೇಜ್ ಮತ್ತು ಜಾರ್ಖಂಡ್ ಪೊಲೀಸ್‌ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾಲುದ್ದೀನ್ ಅವರನ್ನು ಬಂಧಿಸುವುದರೊಂದಿಗೆ ಪಾಟ್ನಾ ಭಯೋತ್ಪಾದನಾ ಘಟಕ ಪ್ರಕರಣವನ್ನು ಭೇದಿಸಿತ್ತು.

೨೦೪೭ ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಮಾಡ್ಯೂಲ್ ಯೋಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸುವ ಸಂಚು ಕೂಡ ಇತ್ತು ಎಂದು ವರದಿಗಳು ತಿಳಿಸಿವೆ.