ಬೆಂಗಳೂರು,ಜು.26-ನಗರ ಸೇರಿದಂತೆ ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಬಂಧಿತರಾಗಿರುವ ಐವರು ಶಂಕಿತ ಉಗ್ರರನ್ನು ಎನ್ಐಎ ವಿಶೇಷ ನ್ಯಾಯಾಲಯ ಮತ್ತೆ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಶಂಕಿತ ಉಗ್ರರನ್ನು ಹಾಜರುಪಡಿಸಲಾಗಿತ್ತು.
ನಗರದಲ್ಲಿ ವಿಧ್ಬಂಸಕ ಕೃತ್ಯವೆಸಲು ಸಂಚು ರೂಪಿಸಿದ್ದು, ಈ ಸಂಬಂಧ ಶಂಕಿತರಿಂದ ಗ್ರೆನೇಡ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ವೇಳೆ ಉಗ್ರ ಕೃತ್ಯವೆಸಗಲು ತಯಾರಿ ನಡೆಸಿದ್ದ ಆಂಶ ಬೆಳಕಿಗೆ ಬಂದಿದೆ. ಶಂಕಿತರನ್ನು ತೀವ್ರ ವಿಚಾರಣೆಗೊಳಪಡಿಸಬೇಕಿದೆ.
ಅಲ್ಲದೇ ಶಂಕಿತರು ನಡೆಸುತ್ತಿದ್ದ ಚಟುವಟಿಕೆಗಳ ಹಿಂದೆ ಹಲವು ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯಿದ್ದು, ಆರೋಪಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಬೇಕಿದೆ. ಹೀಗಾಗಿ 15 ದಿನಗಳ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ ಪರ ವಕೀಲರು ಮನವಿ ಮಾಡಿದರು.
ವಾದ- ಪ್ರತಿವಾದ ಆಲಿಸಿ ಅಂತಿಮವಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಲಯ ಸಮ್ಮತಿಸಿತು. ಸದ್ಯ ಮಡಿವಾಳದ ಎಫ್ಎಸ್ಎಲ್ನ ವಿಚಾರಣಾ ಕೊಠಡಿಯಲ್ಲಿ ಸಿಸಿಬಿ ಶಂಕಿತರನ್ನು ವಿಚಾರಣೆಗೊಳಪಡಿಸಿದೆ. ಪ್ರಕರಣದ ಮೊದಲ ಆರೋಪಿ ಉಗ್ರ ಟಿ.ನಜೀರ್ನನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಸಿದ್ದತೆ ನಡೆಸಿದ್ದು, ಜೈಲಿನಲ್ಲಿರುವ ಉಗ್ರ ನಜಿರ್ನ ವಿಚಾರಣೆ ನಡೆಸಿದರೆ ಮತ್ತಷ್ಟು ಅಂಶಗಳು ಹೊರಬೀಳಲಿವೆ.
ಪ್ರಕರಣ ಎರಡನೇ ಆರೋಪಿ ಜುನೈದ್ಗೆ ಉಗ್ರ ಚಟುವಟಿಕೆ ನಡೆಸುವಂತೆ ಬ್ರೈನ್ ವಾಶ್ ಮಾಡಿದ್ದ ನಜಿರ್ 2008ರ ಸರಣಿ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ.
ಐವರು ಶಂಕಿತರು ಬಂಧನ:
ಕಳೆದ ಜುಲೈ 19ರಂದು ರಾಜ್ಯ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಗಂಭೀರ ಆರೋಪದಡಿ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದರು. ಬಸ್ ನಿಲ್ದಾಣ ಸೇರಿದಂತೆ ನಗರದ ಜನಸಂದಣಿ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಲು ಹೊಂಚು ಹಾಕುತ್ತಿದ್ದ ಆರೋಪದಡಿ ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬವರನ್ನು ಬಂಧಿಸಿ 7 ಕಂಟ್ರಿಮೇಡ್ ಪಿಸ್ತೂಲ್ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್, ಒಂದು ಡ್ರ್ಯಾಗರ್ ಹಾಗೂ 12 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ಶಾಮೀಲಾಗಿರುವ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಶಂಕಿತ ಉಗ್ರ ಟಿ. ನಜೀರ್ ಸದ್ಯ ಆತ ನ್ಯಾಯಾಂಗ ಬಂಧನಲ್ಲಿದ್ದಾನೆ. ಎರಡನೇ ಆರೋಪಿ ಜುನೈದ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆಗಾಗಿ ಬಂಧಿತ ಐವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದರು.