ಶಂಕಿತ ಉಗ್ರ ಮಾಝ್ ತಂದೆ ಹಠಾತ್ ಸಾವು

ಶಿವಮೊಗ್ಗ, ಸೆ.23-ನಗರ ಪೊಲೀಸರಿಂದ‌ ಬಂಧಿತನಾಗಿದ್ದ ಶಂಕಿತ ಉಗ್ರ ಮಾಝ್ ತಂದೆ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಗನ ಬಂಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಮುನೀರ್ ಅಹಮದ್ ಇಂದು ಸಂಜೆ ಎದೆನೋವಿನ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಹಿನ್ನಲೆ ಮಾಝ್‌ನನ್ನು ಶಿವಮೊಗ್ಗ ಪೊಲೀಸರು ಇಂದು ರಾತ್ರಿಯೇ ಮಂಗಳೂರಿಗೆ ಕರೆದೊಯ್ಯಲಿದ್ದಾರೆ.
ಮಾಝ್ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿದ್ದ ಮುನೀರ್, ಆತನ ಶಿಕ್ಷಣಕ್ಕಾಗಿ ತೀರ್ಥಹಳ್ಳಿಯಿಂದ ಮಂಗಳೂರಿಗೆ ಶಿಫ್ಟ್ ಆಗಿದ್ದರು. ತಮ್ಮ ಮಗ ಸೆ.14 ರಿಂದ ನಾಪತ್ತೆಯಾಗಿದ್ದಾನೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕೂಡಾ ಸಲ್ಲಿಸಿದ್ದರು. ಮನೆ ಕೆಳಗೆ ಪಾರ್ಸೆಲ್ ತೆಗೆದುಕೊಂಡು ಬರಲು ಹೋದವನು ವಾಪಸ್ ಬಂದಿರಲೇ ಇಲ್ಲ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಮಾಝ್ ತಂದೆಗೆ 53 ವರ್ಷ ವಯಸ್ಸಾಗಿದ್ದು, ಮಗನ ಬಂಧನದ ಬಳಿಕ ಕುಗ್ಗಿಹೋಗಿದ್ದರು. ಹೀಗಾಗಿ ಅವರಿಗೆ ಹೃದಯಾಘಾತ ಉಂಟಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ. ಇನ್ನೂಬ್ಬ ಬಂಧಿತ ಶಾರೀಕ್ ತಂದೆ ಕೂಡಾ ಒಂದೂವರೆ ತಿಂಗಳ ಹಿಂದಷ್ಟೆ ನಿಧನರಾಗಿದ್ದರು.