ಶಂಕಿತ ಉಗ್ರ ಜುನೈದ್ಸ ಹಚರ ರೌಡಿ ಅರ್ಷದ್ ಸೆರೆ

ಬೆಂಗಳೂರು,ಆ.೨೯- ರಾಜ್ಯ- ಹೊರರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ ಬಂಧನ ಪ್ರಕರಣದ ತಲೆಮರೆಸಿಕೊಂಡಿರುವ ಎರಡನೇ ಆರೋಪಿ ಜುನೈದ್ ಸಹಚರನನ್ನು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಆರ್‌ಟಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುನೈದ್ ಸಹಚರ ಕುಖ್ಯಾತ ರೌಡಿ ಮೊಹಮ್ಮದ್ ಅರ್ಷದ್ ಖಾನ್ ಬಂಧಿತ ಆರೋಪಿಯಾಗಿದ್ದು, ಆತನನ್ನು ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಬಂಧಿತ ಅರ್ಷದ್ ಖಾನ್ ಶಂಕಿತ ಉಗ್ರ ಜುನೈದ್ ಅಹ್ಮದ್‌ನ ಸಹಚರನ ಅಲ್ಲದೇ ಆಪ್ತ ಸ್ನೇಹಿತನಾಗಿದ್ದು,ರಾಜ್ಯದಲ್ಲಿ ಭಯೋತ್ಪಾದನಾ ಘಟಕವನ್ನು ಸಕ್ರಿಯಗೊಳಿಸಿರುವ ಶಂಕೆ ವ್ಯಕ್ತವಾಗಿದೆ.ಸೆರೆಸಿಕ್ಕಿರುವ ಮೊಹಮ್ಮದ್ ಅರ್ಷದ್ ಖಾನ್ ೨೦೧೭ ರಲ್ಲಿ ನೂರ್ ಅಹಮ್ಮದ್ ಎಂಬಾತನ ಅಪಹರಿಸಿ ಕೊಲೆಗೈದ ಪ್ರಕರಣದ ಆರೋಪಿಯಾಗಿ ನಾಲ್ಕು ವರ್ಷದಿಂದ ತಲೆ ಕರೆಸಿಕೊಂಡು ಓಡಾಡುತ್ತಿದ್ದ ವೇಳೆ ಜುನೈದ್ ನ ಸಂಪರ್ಕಕ್ಕೆ ಬಂದು ಸಾಕಷ್ಟು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು.
ಖಚಿತವಾದ ಮಾಹಿತಿಯನ್ನು ಆಧರಿಸಿ ಎರಡು ದಿನಗಳ ಹಿಂದೆ ಆರ್‌ಟಿ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಅರ್ಷದ್ ಖಾನ್ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.ಕೂಡಲೇ ಪೊಲೀಸರು ಆತನನ್ನು ಸಮಾಧಾನಪಡಿಸಲು ಮುಂದಾದರೂ ಚಾಕುವನ್ನು ಎಸೆದು ತಪ್ಪಿಸಿಕೊಳ್ಳಲು ಎರಡನೇ ಅಂತಸ್ತಿನ ಮನೆಯಿಂದ ಜಿಗಿದಿದ್ದಾನೆ. ಎಚ್ಚೆತ್ತ ಪೊಲೀಸರು ಆತನನ್ನು ಬಂಧಿಸಿದ್ದು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.
೨೦೧೭ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ನೂರ್ ಅಹ್ಮದ್ ಕೊಲೆ ಪ್ರಕರಣದಲ್ಲಿ ಅರ್ಷದ್ ಖಾನ್ ಭಾಗಿಯಾಗಿದ್ದ. ಐವರು ಶಂಕಿತ ಭಯೋತ್ಪಾದಕರು ಮತ್ತು ಜುನೈದ್ ಕೂಡ ಅದೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು.ಕೊಲೆ ಪ್ರಕರಣದ ಆರೋಪ ಹೊತ್ತಾಗ ಅರ್ಷದ್ ಖಾನ್ ೧೭ ವರ್ಷದ ಯುವಕನಾಗಿದ್ದು ಜಾಮೀನಿನ ಮೇಲೆ ಹೊರಬಂದ ನಂತರ ಕೊಲೆ ಯತ್ನ, ದರೋಡೆ ಮುಂತಾದ ಹಲವಾರು ಅಪರಾಧಗಳನ್ನು ಎಸಗಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ೧೭ ಪ್ರಕರಣಗಳು ಬಾಕಿ ಇವೆ.
ಜುನೈದ್ ಸಂಪರ್ಕ:
ಜುನೈದ್ ಸಕ್ರಿಯಗೊಳಿಸಿದ ಭಯೋತ್ಪಾದನಾ ಘಟಕದಲ್ಲಿ ಅರ್ಷದ್ ಖಾನ್ ಪಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಅರ್ಷದ್ ಖಾನ್ ಜುನೈದ್ ಜೊತೆ ಸಂಪರ್ಕದಲ್ಲಿದ್ದುದ್ದರ ಬಗ್ಗೆ ಮಾಹಿತಿಯಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಕುಖ್ಯಾತ ರೌಡಿಯಾಗಿದ್ದ ಜುನೈದ್ ಖಾನ್, ೨೦೦೮ರ ಬೆಂಗಳೂರು ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಟಿ ನಜೀರ್ ಎಂಬಾತ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದಾಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬ್ರೈನ್ ವಾಶ್ ಮಾಡಿದ್ದ.
ಭಯೋತ್ಪಾದನಾ ಘಟಕ:
ಈತ ಇತರ ಐವರ ಜೊತೆ ಜಾಮೀನಿನ ಮೇಲೆ ಹೊರಬಂದ ನಂತರ ನಗರದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಭಯೋತ್ಪಾದನಾ ಘಟಕವನ್ನು ಸಕ್ರಿಯಗೊಳಿಸಿದ್ದ ಎನ್ನಲಾಗಿದೆ.ನಗರದಲ್ಲಿ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಸಿದ್ದರು. ಈ ಐವರಿಗೆ ಶಂಕಿತ ಉಗ್ರ ಜುನೈದ್ ವಿದೇಶದಿಂದ ಐವರಿಗೆ ಗ್ರೆನೇಡ್ ಕಳಿಸಿದ್ದನು. ಸದ್ಯ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.ಆರೋಪಿ ಜುನೈದ್ ಅಹ್ಮದ್ ಪತ್ತೆಗೆ ಸಿಸಿಬಿ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿ ಪತ್ತೆ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.