ಶಂಕಿತ ಉಗ್ರರ ದಾಳಿ ೧೦೦ಕ್ಕೂ ಹೆಚ್ಚು ಜನರ ಸಾವು

ನ್ಯಾಮೆ (ನೈಜರ್), ಜ.೩- ಪಶ್ಚಿಮ ಆಫ್ರಿಕದ ದೇಶ ನೈಜರ್‌ನ ಗಡಿ ಪ್ರದೇಶಗಳಲ್ಲಿ ಶಂಕಿತ ಉಗ್ರರರು ನಡೆಸಿದ ಸರಣಿ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ೧೦೦ ದಾಟಿದೆ ಎಂದು ದೇಶದ ಪ್ರಧಾನಿ ಬ್ರಿಗಿ ರಫಿನಿ ಹೇಳಿದ್ದಾರೆ.
ಮಾಲಿ ದೇಶದ ಜೊತೆಗಿನ ಗಡಿಯ ಸಮೀಪವಿರುವ ಎರಡು ಗ್ರಾಮಗಳಲ್ಲಿ ನಡೆದ ದಾಳಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಅವರು, ದಾಳಿಯಲ್ಲಿ ಸಾವನ್ನಪ್ಪಿರುವ ಮಾಹಿತಿ ಅಧಿಕೃತ ಗೊಳಿಸಿದ್ದು, ಆದರೆ, ಇದಕ್ಕೆ ಯಾರು ಹೊಣೆ ಎಂದು ತಿಳಿದು ಬಂದಿಲ್ಲಿ
ಮಾಲಿ ದೇಶದ ಗಡಿಗೆ ಹೊಂದಿಕೊಂಡಿರುವ ಟೋಕೊಬಾಂಗೋ ಗ್ರಾಮವೊಂದರಲ್ಲಿ ಉಗ್ರರು ಈ ಮಾರಣಾಂತಿಕ ದಾಳಿಯನ್ನು ನಡೆಸಿದ್ದು, ಸ್ಥಳದಲ್ಲಿಯೇ ೪೯ ಮಂದಿ ಸಾವನ್ನಪ್ಪಿದ್ದರು ಹಾಗೂ ೧೭ ಜನರಿಗೆ ಗಂಭೀರ ಗಾಯಗಳಾಗಿದ್ದವು ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೆ ಝರೋಮಾಡ್ರೇಯಿ ಗ್ರಾಮದಲ್ಲಿಯೂ ಉಗ್ರರು ನಡೆಸಿದ ದಾಳಿಯಲ್ಲಿ ಸ್ಥಳದಲ್ಲಿಯೇ ೩೦ ನಾಗರಿಕರು ಸಾವನ್ನಪಿದ್ದಾರೆ ಎಂದು ವರದಿಗಳು ತಿಳಿಸಿವೆ. ದಾಳಿಯ ವೇಳೆ ಇಬ್ಬರು ಫ್ರಾನ್ಸ್ ಸೈನಿಕರು ಮೃತಪಟ್ಟಿದ್ದಾರೆ.

ಮತ್ತೊಂದೆಡೆ ಈ ಹಿಂದೆ ಗ್ರಾಮಸ್ಥರು ಇಬ್ಬರು ಬಂಡುಕೋರರನ್ನು ಕೊಂದಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಅಲ್ಲಿನ ಸಚಿವರು ಅಭಿಪ್ರಾಯಪಟ್ಟರು.

ನೈಜರ್‌ನಲ್ಲಿ ನಡೆದ ಮೊದಲ ಸುತ್ತಿನ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ದಿನವೇ ಹಿಂಸಾಚಾರ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.