ಬೆಂಗಳೂರು,ಜು.೨೬-ನಗರದ ಸೇರಿದಂತೆ ರಾಜ್ಯದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಬಂಧಿತರಾಗಿರುವ ಐವರು ಶಂಕಿತ ಭಯೋತ್ಪಾದಕರ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಬಂಧಿತರನ್ನು ಸಿಸಿಬಿ ಪೊಲೀಸರು ಇಂದು ಶಂಕಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ ೭ ದಿನಗಳ ಕಾಲ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಏಳು ದಿನಗಳ ಕಾಲ ತೀವ್ರ ವಿಚಾರಣೆ ನಡೆದಿದ್ದು, ವಿಚಾರಣೆಯಲ್ಲಿ ಹಲವು ಸ್ಪೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ.
ಮತ್ತೊಂದೆಡೆ, ತಲೆಮರೆಸಿಕೊಂಡಿರುವ ಜುನೈದ್ ಹಾಗೂ ಗ್ರೆನೇಡ್ ತಂದುಕೊಟ್ಟ ವ್ಯಕ್ತಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ. ಇನ್ನೂ ಕೆಲವರು ಶಂಕಿತರ ಜೊತೆ ಸಂಪರ್ಕದ ಶಂಕೆ ಇದ್ದು ಮತ್ತೆ ಏಳು ದಿನಗಳ ಕಾಲ ಕಸ್ಟಡಿಗೆ ಕೇಳಲು ಸಿಸಿಬಿ ಸಿದ್ದತೆ ನಡೆಸುತ್ತಿದೆ.
ಪ್ರಕರಣದ ಪ್ರಮುಖ ಆರೋಪಿ ಉಗ್ರ ಟಿ.ನಜೀರ್‌ನನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಕಾರ್ಯಪ್ರವೃತ್ತವಾಗಿದ್ದು, ಜೈಲಿನಲ್ಲಿರುವ ಉಗ್ರ ನಜೀರ್‌ನ ವಿಚಾರಣೆ ನಡೆಸಿದರೆ ಮತ್ತಷ್ಟು ಅಂಶಗಳು ಹೊರಬೀಳಲಿವೆ. ಪ್ರಕರಣದ ಎರಡನೇ ಆರೋಪಿ ಜುನೈದ್‌ಗೆ ಉಗ್ರ ಚಟುವಟಿಕೆ ನಡೆಸುವಂತೆ ಬ್ರೈನ್‌ವಾಶ್ ಮಾಡಿದ್ದ ನಜೀರ್ ೨೦೦೮ರ ಸರಣಿ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ.
ಈ ನಡುವೆ ಶಂಕಿತ ಉಗ್ರರು ನಗರದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಲ್ಲದೇ ಡ್ರಗ್ಸ್ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬಂಧಿತರ ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಹಾಗೂ ಉಮರ್ ಇಬ್ಬರು ಶಂಕಿತ ಉಗ್ರರರು ಡ್ರಗ್ಸ್ ಸಪ್ಲೈ ಮಾಡುತ್ತಿರುವುದು ಶಂಕಿತ ಉಗ್ರ ಮುದಾಸಿರ್ ಪ್ರಿಯತಮೆ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಮುದಾಸಿರ್ ಪ್ರಿಯತಮೆ ಕೈಯಲ್ಲಿ ಡ್ರಗ್ಸ್ ಇಟ್ಟು ನಾನು ಹೇಳಿದವರಿಗೆ ಇದನ್ನು ಕೊಡು ಎಂದು ಹೇಳಿ ಹೋಗುತ್ತಿದ್ದನಂತೆ.ಅದರಂತೆ ಪ್ರಿಯತಮ ಮುದಾಸಿರ್ ಹೇಳಿದವರಿಗೆ ಗೆಳತಿ ಡ್ರಗ್ಸ್ ಕೊಡುತ್ತಿದ್ದಳು ಎಂದು ವಿಚಾರಣೆಯಲ್ಲಿ ತಿಳಿಸಿದ್ದಾಳೆ.