ಶಂಕಿತರ ಉಗ್ರರಿಗೆ ದಾವಣಗೆರೆಯ ಲಿಂಕ್ ; ಸಿಸಿಬಿ ಪೋಲೀಸರಿಂದ ವಿಚಾರಣೆ

ದಾವಣಗೆರೆ, ಜು. ೨೦- ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನದ ಹಿನ್ನೆಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ದಾವಣಗೆರೆಯಲ್ಲಿ ಕಾರ್ಯಾಚರಣೆ ನಡೆಸಿ ಮತ್ತೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಶಂಕಿತರ ಉಗ್ರರಿಗೆ ದಾವಣಗೆರೆಯ ಲಿಂಕ್ ಇದ್ಯಾ ಎಂಬ ಸಂಶಯ ವ್ಯಕ್ತವಾಗಿದೆ. ಸಿಸಿಬಿ ದಾವಣಗೆರೆಯ ಆಜಾದ್ ನಗರದ ನಿವಾಸಿ ಫಯಾಜ್ ವುಲ್ಲಾ‌ (30) ವಿಚಾರಣೆ ನಡೆಸುತ್ತಿದೆ. ಬೆಳಿಗ್ಗೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾವಣಗೆರೆ ಆಗಮಿಸಿ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಅಕ್ರಮವಾಗಿ ಆಯುಧ ಮಾರಾಟ ವಿಚಾರವಾಗಿ ಇತನ ಮೇಲೆ ಐದು ಪ್ರಕರಣ ದಾಖಲಾಗಿದ್ದವು. ಜಾಮೀನು ಮೇಲೆ ಹೊರಗಿದ್ದ ಈತನನ್ನು ಮತ್ತೆ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.ಬೆಂಗಳೂರಲ್ಲಿ ಸ್ಫೋಟಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತರ ಉಗ್ರರನ್ನು ಜುಲೈ 19 ರಂದು ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದರು. ಇವರ ಬಳಿ ಇದ್ದ 45 ಜೀವಂತ ಗುಂಡು, ಏಳು ಪಿಸ್ತೂಲ್, ವಾಕಿಟಾಕಿ, ಮೊಬೈಲ್ ಸಿಮ್ ಕಾರ್ಡ್​ಗಳನ್ನು ವಶಕ್ಕೆ ಪಡೆಯಲಾಗಿತ್ತು. ಆ ಮೂಲಕ ರಾಜಧಾನಿಯಲ್ಲಿ ನಡೆಯುತ್ತಿದ್ದ ಉಗ್ರರ ಪ್ಲಾನ್ ಅನ್ನು ವಿಫಲಗೊಳಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದರು.