ಶಂಕರ ಬೈಚಬಾಳರ “ಕೆಂಪು ಹುಡುಗಿ ಕಪ್ಪುಕಾಲ್ಮರಿ” ಕೃತಿಯ ವಿಚಾರ ಸಂಕಿರಣ

ವಿಜಯಪುರ.,ಮೇ.28 :ಸಾಹಿತಿ ಶಂಕರ ಬೈಚಬಾಳರ “ಕೆಂಪು ಹುಡುಗಿ ಕಪ್ಪು ಕಾಲ್ಮರಿ” ಕೃತಿಯ ವಿಚಾರ ಸಂಕಿರಣ ಕಾರ್ಯಕ್ರಮ ವಿಜಯಪುರದ ವೀರೇಸ್ ಫಿಲ್ಮ್ಸ್ ಪ್ರೊಡಕ್ಷನ್‍ದ ಆಶ್ರಯದಲ್ಲಿ ನಡೆಯಿತು.
ಕೃತಿ ಕುರಿತು ದಾವಣಗೆರೆಯ ಚಿಂತಕ ಡಾ. ಮಲ್ಲಿಕಾರ್ಜುನ ಹಲಸಂಗಿ ಅವರು ಮಾತನಾಡಿ, ಶಂಕರ ಬೈಚಬಾಳರ ಈ ಕೃತಿಯು ತುಂಬಾ ವಿಭಿನ್ನವಾಗಿದ್ದು ಹಲವಾರು ಸಮಾಜಮುಖಿ ಅಂಶಗಳನ್ನು ಒಳಗೊಂಡಿದೆ ಎಂದರು.
ಒಂದು ಸಮಾಜವನ್ನು ಜಾಗೃತಗೊಳಿಸುವ, ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ವೈಚಾರಿಕ ನೆಲೆಯಲ್ಲಿ ಅನಾವರಣಗೊಂಡಿರುವ ಕತೆಗಳು ಲೋಕದ ಸತ್ಯಾಸತ್ಯತೆಗಳ ಕಡೆಗೆ ಮುಖ ಮಾಡಿ ನಿಲ್ಲುತ್ತವೆ. ದಿನನಿತ್ಯದ ಬದುಕಿನ ಹಲವು ಮಜಲುಗಳಲ್ಲಿನ ಮುಗ್ಧತೆಯ ಪಾತ್ರಗಳು ನಿಜವಾಗಿಯೂ ಓದುಗರನ್ನು, ವಿಮರ್ಶಕರನ್ನು ಹಾಗೂ ಚಿಂತಕರನ್ನು ಸೆಳೆಯುವ ಕೆಲಸವನ್ನು ಇಲ್ಲಿಯ ಸಣ್ಣ ಕತೆಗಳ ಪ್ರಕಾರದಲ್ಲಿ ಸೆರೆ ಹಿಡಿದಿರುವುದು ಬೈಚಬಾಳರ ಗಟ್ಟಿಯಾದ ಸಾಹಿತ್ಯ ಕೃಷಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಜಯಪುರದ ಹಿರಿಯ ಸಾಹಿತಿ, ಅಂಕಣಕಾರ ಸುಭಾಸ ಯಾÁದವಾಡ ಅವರು, ಕತೆಗಳಲ್ಲಿನ ಭಾಷೆ ಕತೆ ಹುಟ್ಟಿದ ನೆಲದ ಮಣ್ಣಿನ ವಾಸನೆಯ ಗಟ್ಟಿತನಕ್ಕೆ ಸಾಕ್ಷಿಯಾಗಿವೆ. ಈ ಸಂಕಲನದ ಬಹುತೇಕ ಕತೆಗಳು ಬದುಕನ್ನು ಅದರದೇ ಆದ ಸಹಜ ಲಯದಲ್ಲಿ ಅಪ್ಪಟ ಗ್ರಾಮೀಣ ಸೊಗಡಿನ ಮೋಡಿಯಲ್ಲಿ ಒಡಲಗೊಂಡಿರುವುದು ಎಂತಹವರನ್ನು ಬೆರಗುಗೊಳಿಸುತ್ತದೆ. ಕಾಲ್ಮರಿ, ಟಣ್‍ಟಣಾಟಣ್, ಗಂಡ್ಗಚ್ಚಿ, ಸುಂಬ್ಳಾ, ಮೂಗಿನ ಹೊಳ್ಳಿ, ಹೆಂಡ್ಕಾಸ್ ಮುಂತಾದ ಶಬ್ದಗಳು ಗ್ರಾಂಥಿಕ ಭಾಷಿಕರಿಗೆ ಕನ್ನಡ ಭಾಷೆಯಲ್ಲಿ ಗ್ರಾಮೀಣ ಸೊಗಡಿನ ಶಬ್ದಗಳಿಗೆ ಎಂತಹ ಗಟ್ಟಿತನ ಇದೆ ಎಂಬ ಅಚ್ಚರಿಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿಗಳೂ ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಎಮ್. ಪಾಟೀಲ ಮಾತನಾಡಿ, ಹಿರಿಯ ಸಾಹಿತಿ ಬೈಚಬಾಳರ ಈ ಕೃತಿಯು ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿದ್ದು ಕೃತಿಯ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡ ವೀರೇಶ ಫಿಲ್ಮ್ ಪ್ರೊಡಕ್ಷನ್‍ರವರ ಕಾರ್ಯವನ್ನು ಶ್ಲಾಘಿಸಿದರು.
ಸಾನಿಧ್ಯ ವಹಿಸಿದ ಹಿಕ್ಕಿನಗುತ್ತಿ ಮಹಾಮನೆಯ ಪ್ರಭುಲಿಂಗಶರಣರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ತಲೆಎತ್ತಿದ ವೀರೇಶ್ ಫಿಲ್ಮ್ ಪ್ರೊಡಕ್ಷನ್ ಮುಖಾಂತರ ಉತ್ತರ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಭೆಗಳನ್ನು ನಾಡಿಗೆ ಪರಿಚಯ ಮಾಡುವ ಪ್ರಯತ್ನ ಯಶಸ್ವಿಯಾಗಲಿ ಎಂದರು.
ವೀರೇಶ್ ಫಿಲ್ಮ್ ಅಕಾಡೆಮಿಯ ಅಧ್ಯಕ್ಷ ವೀರೇಶ ಬಿರಾದಾರ ಮಾತನಾಡಿ, ಶಂಕರ ಅವರ ಕೃತಿಯಲ್ಲಿ ಕೆಲವು ಕತೆಗಳು ತುಂಬಾ ವಿಶೇಷವಾಗಿದ್ದು ಪ್ರಸ್ತುತ ಪರಿಸ್ಥಿತಿಯ ಸೂಕ್ಷ್ಮತೆಗಳನ್ನು ಒಳಗೊಂಡಿದ್ದು “ಮಸಬಿನಾಳದ ಪಶುವಾದಿಗಳು” ಅಂತ ಕತೆಗಳು ಚಲನಚಿತ್ರಗಳಿಗೆ ಬಳಸಿಕೊಳ್ಳಲು ಪೂರಕವಾಗಿರುವುದರಿಂದ ಅಂತಹ ಪ್ರಯತ್ನ ಮಾಡಲು ಮುಂದಾಗಿದ್ದೇವೆ ಎಂದರು.
ಸಾಹಿತಿ ಸಿದ್ಧರಾಮ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ದಳವಾಯಿ ನಿರೂಪಿಸಿದರು. ಹಿರಿಯ ಸಾಹಿತಿ ದಾನೇಶ ಅವಟಿ, ರಾಜಶೇಖರ ಜಂಬಗಿ ಮುಂತಾದವರು ಉಪಸ್ಥಿತರಿದ್ದರು.