ಶಂಕರ ದೇವರಗೆ ಕ.ಸಾ.ಪ ದತ್ತಿ ಪ್ರಶಸ್ತಿ ಪ್ರದಾನ

ರಾಯಚೂರು,ಮಾ.೧೩- ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕದ ಯುವ ಸಾಹಿತಿ, ಲೇಖಕ, ಶಿಕ್ಷಕ ಶಂಕರ ದೇವರು ಹಿರೇಮಠ ಅವರ ಮಕ್ಕಳ ಬಾಳಿನ ಬೆಳಕು ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಇರುವ ಶ್ರೀ ಕೃಷ್ಣರಾಜ ಪರಿಷತ್ ಸಭಾಂಗಣದಲ್ಲಿ ೨೦೨೧ನೇ ಸಾಲಿನ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ದತ್ತಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಹಾಗೂ ದತ್ತಿ ದಾನಿಗಳ ನೆರವಿನ ಬಗ್ಗೆ ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ನಿರಂಜನ ವಾನಳ್ಳಿ ಅವರು ನೇರವೆರಿಸಿದರು. ದತ್ತಿ ಪ್ರಶಸ್ತಿಗಳ ಪ್ರದಾನವನ್ನು ಮುಖ್ಯಮಂತ್ರಿಗಳ ಕಾಯ೯ದಶಿ೯ಗಳಾದ ಜಯರಾಂ ರಾಯಪುರ ಅವರು ಮಾಡಿದರು. ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿಗಳು ಹಾಗೂ ಚಿಂತಕರಾದ ಕಾಳೇಗೌಡ ನಾಗವಾರ ಅವರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಸ್ವಾಗತವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಳಾದ ಡಾ ಪದ್ಮನಿ ನಾಗರಾಜ್ ಅವರು ವಂದನಾರ್ಪಣೆ ಮಾಡಿದರು. ಸಮಾರಂಭದ ನಿರೂಪಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಪಟೇಲ್ ಪಾಂಡು ಅವರು ನಿರೂಪಿಸಿದರು.
ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತಿ ಶಂಕರ ದೇವರು ಹಿರೇಮಠ ಅವರು ಮಕ್ಕಳಿಗಾಗಿ ಬರೆದ ಮಕ್ಕಳ ಬಾಳಿನ ಬೆಳಕು ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ ಕೃತಿಯು ಸಾವಿತ್ರಿಬಾಯಿ ಫುಲೆ ಅವರು ಮಕ್ಕಳಿಗಾಗಿ ಅವರು ನೀಡಿದ ಕೊಡುಗೆ ಕುರಿತಾಗಿ ವಿವರ ಇದೆ.
ಅಂದಿನ ದಿನಗಳಲ್ಲಿ ಮಕ್ಕಳಿಗಾಗಿ ಶಾಲೆಗಳನ್ನು ತೆರೆದು ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಹಾಗೂ ಅವರು ಅನುಭವಿಸಿದ ಅವಮಾನ, ಕಷ್ಟಗಳ ಕುರಿತು ಮಕ್ಕಳಿಗೆ ತಿಳಿಸುವ ಜೀವನ ಚರಿತ್ರೆ ರಚನೆಯಾಗಿದೆ. ಈ ಕೃತಿಗೆ ದತ್ತಿ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಜಯರಾಂ ರಾಯಪುರ ಅವರು ಪ್ರದಾನ ಮಾಡಿದರು.
ಶಂಕರ ದೇವರು ಹಿರೇಮಠ ಅವರಿಗೆ ಕ.ಸಾ.ಪ ದತ್ತಿ ಪ್ರಶಸ್ತಿ ದೊರೆತಿರುವುದು ಸಂತೋಷ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ಮಾಜಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಎಸ್.ಶರಣೇಗೌಡ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಶಂಬೋಜಿ, ತಾಲೂಕು ಕಸಾಪ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಸಾಹಿತಿಗಳಾದ ಮೌಲಪ್ಪ ಮಾಡಶಿರವಾರ, ಶ್ರೀಶೈಲ ಅಂಬಿಗೇರ, ದುರುಗಪ್ಪ ಗುಡದೂರ, ವಿರುಪಾಕ್ಷಪ್ಪ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.