ವ್ಹೀಲಿಂಗ್ ಗೆ ಬೈಕ್ ಕಳವು ಇಬ್ಬರು ಖದೀಮರ ಸೆರೆ

ಬೆಂಗಳೂರು,ಜೂ.10-ವ್ಹೀಲಿಂಗ್ ಮಾಡಲು ಬೈಕ್ ಕಳ್ಳತನ ಮಾಡುವುದನ್ನು ಕರಗತ ಮಾಡಿಕೊಂಡಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಗುರಪ್ಪನಪಾಳ್ಯದ ಅರ್ಬಾನ್ ಖಾನ್ ಆಲಿಯಾಸ್ ಶಕ್ತಿಮಾನ್ ಹಾಗೂ‌ ಮೊಹಮ್ಮದ್ ಆನೀಸ್ ಬಂಧಿತ ಆರೋಪಿಗಳಾಗಿದ್ದಾರೆ.
ಇತ್ತೀಚೆಗೆ ತಿಲಕ್ ನಗರದಲ್ಲಿ ಬೈಕ್ ಹ್ಯಾಂಡಲ್ ಮುರಿದು ಕಳ್ಳತನ ಮಾಡುವ ಹಾವಳಿ ಹೆಚ್ಚಾಗಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿ 13 ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.ಆರೋಪಿಗಳ ಪೈಕಿ ಅರ್ಬಾನ್ ವಿರುದ್ಧ ಈ ಹಿಂದೆ ತಿಲಕ್ ನಗರ, ಕಾಮಾಕ್ಷಿಪಾಳ್ಯ, ಸುದ್ದುಗುಂಟೆಪಾಳ್ಯ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಅರ್ಬಾನ್, ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಬೈಕ್ ಕದಿಯುತ್ತಿದ್ದ.ವ್ಹೀಲಿಂಗ್ ಮಾಡುವುದಕ್ಕೆ ಕಳ್ಳತನ ಮಾಡುತ್ತಿದ್ದ. ಪೆಟ್ರೋಲ್ ಖಾಲಿಯಾದರೆ ಬೈಕ್ ಅಲ್ಲೆ ಬಿಟ್ಟು ಅದೇ ಜಾಗದಲ್ಲಿ ಮತ್ತೊಂದು ಗಾಡಿ ಕದಿಯುತ್ತಿದ್ದ. ಆದರೆ, ಯಾರಿಗೂ ಅದನ್ನ ಮಾರಾಟ ಮಾಡುತ್ತಿರಲಿಲ್ಲ.3 ತಿಂಗಳಲ್ಲಿ ಬರೋಬ್ಬರಿ 65ಕ್ಕೂ ಬೈಕ್ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.