ವ್ಹಿ. ಜಿ. ಮಹಿಳಾ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಲಬುರಗಿ:ಆ.15: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಇಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ವಿನಯ ಎಸ್. ಪಾಟೀಲ್ ಅವರು ಆಗಮಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದಲ್ಲಿ ಭಾಗಿಯಾದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಯರನ್ನು ಉದ್ದೇಶಿಸಿ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದ ದಿನವನ್ನು ದೇಶಾದ್ಯಂತ ಇಂದು ಹಬ್ಬದಂತೆ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಆಗಸ್ಟ್ 15 ರಂದು, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ದೇಶದ ಸ್ವಾತಂತ್ರ್ಯವನ್ನು ಸ್ಮರಿಸಲು ಭಾರತದಾದ್ಯಂತ ಜನರು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯು ಸ್ವಾತಂತ್ರ್ಯದ ಮಹತ್ವವನ್ನು ನೆನಪಿಸುತ್ತದೆ ಮತ್ತು ಅದನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಈ ವರ್ಷದ ಸ್ವಾತಂತ್ರ್ಯ ದಿನದ ಥೀಮ್ ‘ಆಜಾದಿ ಕಾ ಅಮೃತ್ ಮಹೋತ್ಸವ’ ಉಪಕ್ರಮದೊಂದಿಗೆ ಹೊಂದಿಕೆಯಾಗುವ ‘ರಾಷ್ಟ್ರ ಮೊದಲು, ಯಾವಾಗಲೂ ಮೊದಲು’. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರದ ಐತಿಹಾಸಿಕ ಹೋರಾಟದ ಚೈತನ್ಯವನ್ನು ಒಳಗೊಳ್ಳುವ ಘಟನೆಗಳ ಸರಣಿಯನ್ನು ಆಯೋಜಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ವಿಶೇಷ ಸಂದರ್ಭದ ಆಚರಣೆಯನ್ನು ಗುರುತಿಸಲು ಕೇಂದ್ರ ಸರ್ಕಾರವು ಹರ್ ಘರ್ ತಿರಂಗ ಅಭಿಯಾನದ ಎರಡನೇ ಆವೃತ್ತಿಯನ್ನು ಕೂಡಾ ಈಗಾಗಲೆ ಪ್ರಾರಂಭಿಸಿ ಆಚರಿಸಲು ಆದೇಶಿಸಿದೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಮಾತನಾಡುತ್ತಾ ನಮ್ಮ ಹಿರಿಯರು ನೆತ್ತರು ಸುರಿ, ಹೋರಾಟ ಮಾಡಿ ನಮಗೆ ನೀಡಿರುವ ಈ ಅಮೂಲ್ಯವಾದ ಸ್ವಾತಂತ್ರ್ಯಕ್ಕೆ ಕೃತಜ್ಞತೆಯನ್ನು ಸಲ್ಲಿಸುವುದು ಮುಖ್ಯ. ಜಗತ್ತಿನ ಎಷ್ಟೋ ರಾಷ್ಟ್ರಗಳಲ್ಲಿ ಜನರು ಮುಕ್ತವಾದ ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಿಲ್ಲ, ಆದರೆ ಭಾರತದಲ್ಲಿ ಸುಂದರವಾಗಿ ನಮ್ಮ ಇಚ್ಛೆಗೆ ಬದುಕು ಕಟ್ಟಿಕೊಳ್ಳುವ ಎಲ್ಲಾ ಸ್ವಾತಂತ್ರ್ಯವಿದೆ. ಭಾರತದ ಸಂವಿಧಾನಕ್ಕೆ ಗೌರವ ಕೊಡುತ್ತಾ, ಭಾರತ ಮಾತೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವಂತೆ ಬದುಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಇಂದು ನಾವು ವಿಜ್ಞಾನದಲ್ಲಿ ಚಂದ್ರಲೋಕಕ್ಕೆ ರಾಕೆಟ್ ಕಳುಹಿಸುವಷ್ಟರ ಮಟ್ಟಿಗೆ ಬೆಳೆದಿದ್ದೇವೆ, ದೇಶದ ರಕ್ಷಣೆ ಅಂತ ಬಂದಾಗ ನಮ್ಮಲ್ಲಿರುವ ಸೈನ್ಯಬಲ ಇತರ ರಾಷ್ಟ್ರಗಳಿಗೆ £ಡುಕ ಹುಟ್ಟಿಸುವಂತಿದೆ, ಭಾರತ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದೆ. ಆದರೆ ಆತಂರಿಕವಾಗಿ ನೋಡುವುದಾದರೆ ಬಡತನ, ನಿರುದ್ಯೋಗ ಈ ಬಗೆಯ ಸಮಸ್ಯೆಗಳು ಇನ್ನೂ ಇವೆ, ಈ ಸಮಸ್ಯೆಯಿಂದ ಮುಕ್ತಿ ಸಿಕ್ಕರೆ ನಮ್ಮ ಭಾರತ ಮತ್ತಷ್ಟು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು.

ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ಕು. ಅಂಜಲಿ ಯಾದವ ಅವರು ಕೂಡಾ ಸ್ವಾತಂತ್ರ್ಯ ದಿನಾಚರಣೆಯ ಕುರಿತಾಗಿ ಮಾತನಾಡಿದರು.

ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತ್ರರ ಸಿಬ್ಬಂಧಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ತಿಳಿಸಿದ್ದಾರೆ.