ವ್ಯ.ಪ.ವ್ಯಾ.ಸಹಕಾರ ಸಂಘದ ಸಮಾಪನೆ ತೆರವು ಮಾಡದಂತೆ, ತನಿಖೆಗೆ ಆಗ್ರಹ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೧೦: ದಾವಣಗೆರೆ ಜಿಲ್ಲೆಯ ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿಯಮಿತದಲ್ಲಿ 17ಕೋಟಿಗೂ ಹೆಚ್ಚು ಹಣದ ದುರುಪಯೋಗ ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜತೆ, ಯಾವುದೇ ಕಾರಣಕ್ಕೆ ಸಮಾಪನೆ ತೆರವು ಮಾಡಬಾರದು ಎಂದು ಸಹಕಾರ ಸಂಘದ ಮಾಜಿ ನಿರ್ದೇಶಕರು, ಸದಸ್ಯರು ಆಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ಎಸ್.ಎನ್.ಚನ್ನಬಸಪ್ಪ, ಎಂ.ಎಸ್.ಮಲ್ಲಿಕಾರ್ಜುನ, ಆರ್.ಎಸ್. ಗುರು ಶಾಂತಪ್ಪ ಜಂಟಿಯಾಗಿ ಮಾತನಾಡಿ, 2009ರಿಂದ 2018ರ ಅವಧಿಯಲ್ಲಿನ ಆಡಳಿತ ಮಂಡಳಿಯಲ್ಲಿ ಇದ್ದ ಕೆಲವರು ಆಡಳಿತದಲ್ಲಿ ಲೋಪ ಎಸಗಿ, ಕಾಯಿದೆ, ನಿಯಮಗಳನ್ನು ಉಲ್ಲಂಘನೆ ಮಾಡಿ, ಅಕ್ರಮ ಎಸಗಲಾಗಿದೆ. ಈ ಕುರಿತು ಸಹಕಾರ ಇಲಾಖೆಯ ಅಧಿಕಾರಿಗಳಿಂದ ಕಲಂ 65, 68, 69ರ ಅಡಿಯಲ್ಲಿ ತನಿಖೆ ನಡೆಸಿ ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿಯಮಿತವನ್ನು ಸಮಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಅಂದಿನ ಆಡಳಿತ ಮಂಡಳಿಯಲ್ಲಿ ಇದ್ದ ಸದಸ್ಯರ ಅಭಿಪ್ರಾಯಗಳಿಗೆ ಕಿವಿಗೊಡದೆ ಏಕಪಕ್ಷೀಯವಾಗಿ ಏಕಸ್ವಾಮ್ಯವನ್ನು ಸಾಧಿಸುವ ಉದ್ದೇಶದಿಂದ ಅಮಿಷ ಒಡ್ಡಿ, ಬೆದರಿಸಿ ತಾನು ಹೇಳಿದಂತೆ ಮಾಡಿಸಿಕೊಂಡಿದ್ದಾನೆ. ಅಲ್ಲದೇ ಸಂಘದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದರು.ಸಹಕಾರ ಸಂಘದಲ್ಲಿ ರೈತರ ಚಟುವಟಿಕೆಗಳನ್ನು ಬಿಟ್ಟು ಇನ್ನಿತರ ಅಕ್ರಮ ಚಟುವಟಿಕೆ ಮಾಡುತ್ತಾ, ಒತ್ತಾಯಪೂರ್ವಕವಾಗಿ ನಿರ್ದೇಶಕರ ಸಹಿ ಪಡೆದು ಸಂಘದಲ್ಲಿ ದುರಾಡಳಿತ, ಹಣ ದುರುಪಯೋಗ ಮಾಡಿದ್ದಾರೆ. ಕಾರಣ ಈ ಎಲ್ಲಾ ದುರುಪಯೋಗ ಕುರಿತು ಸಮಗ್ರ ತನಿಖೆ ನಡೆಸಿ, ರೈತರು, ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ನೂತನವಾಗಿ  ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿಯಮಿತವನ್ನು ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಎನ್.ಇ.ಶಿವಕುಮಾರ್, ಎಂ.ಆರ್.ಕುಬೇಂದ್ರಪ್ಪ, ಹೆಚ್.ಜಿ.ಮರುಳಸಿದ್ದಪ್ಪ, ಆರ್.ಜಿ. ನರೇಶ್ ಇತರರು ಇದ್ದರು.