ವ್ಯಾಸರಾಜ್ ತೀರ್ಥರು ಅಪರೋಕ್ಷ ಜ್ಞಾನಿಗಳು: ಅನಂತಚಾರ್ಯ ಅಕ್ಮಂಚಿ

ಕಲಬುರಗಿ:ಮಾ.11: ಶ್ರೀ ವ್ಯಾಸರಾಜ್ ತೀರ್ಥರು ಅಪರೋಕ್ಷ ಜ್ಞಾನಿಗಳು. ತಮ್ಮ ಜೀವನ ಪರ್ಯಂತರ ಮಧ್ವ ಮತ ಸಿದ್ದಾಂತ ಸೇವೆ ಮತ್ತು ಪ್ರಚಾರ ಮಾಡಿದರು. ವಿಜಯನಗರದ ಶ್ರೀ ಕೃಷ್ಣ ದೇವರಾಯನ ಆಸ್ಥಾನದಲ್ಲಿ ರಾಜಗುರುಗಳಾಗಿ ರಾಜ್ಯಪಾಲನೆ ಮಾಡಿದವರು ಎಂದು ಮಣ್ಣೂರಿನ ಶ್ರೀ ಅನಂತಚಾರ್ಯ ಅಕ್ಮಂಚಿ ಅವರು ಹೇಳಿದರು.
ಶ್ರೀ ವ್ಯಾಸರಾಜ್ ತೀರ್ಥ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಎಂ.ಎಸ್.ಕೆ. ಮಿಲ್ ಹತ್ತಿರ ಇರುವ ಶ್ರೀ ಸಿದ್ದಿ ಮಾರುತಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಶ್ರೀ ವ್ಯಾಸರಾಜರು ಅನೇಕ ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದಾರೆ. ಬ್ರಹ್ಮಣ್ಯ ತೀರ್ಥರಿಂದ ಆಶ್ರಮ ಸ್ವೀಕರಿಸಿದರು. ತಿರುಪತಿ ಬೆಟ್ಟವನ್ನು ಮಂಡಿಗಾಲಿನಲ್ಲಿ ಹತ್ತಿ ವೆಂಕಟರಮಣನನ್ನು 12 ವರ್ಷಗಳ ಕಾಲ ಪೂಜೆಗೈದರು. ವಿಜಯನಗರ ಕೃಷ್ಣದೇವರಾಯನಿಗೆ ಒದಗಿ ಬಂದಿದ್ದ ಕುಹಯೋಗವನ್ನು ವ್ಯಾಸರಾಜರು ತಆವೇ ಪೀಠದಲ್ಲಿ ವಿರಾಜಮಾನರಾಗಿ ರಾಜನಿಗೆ ಕಂಟಕದಿಂದ ರಕ್ಷಿಸಿದರು ಎಂದರು.
ಬೆಳಿಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ವಿವಿಧ ಪಾರಾಯಣ ಸಂಘಗಳಿಂದ ಸಾಮೂಹಿಕ ಪಾರಾಯಣ, 108 ಬಾರಿ ವ್ಯಾಸರಾಯರ ಚರಮ ಶ್ಲೋಕ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ಜರುಗಿತು. ನಂತರ ನವಗ್ರಹೋಮ ಮತ್ತು ಶ್ರೀ ಸುದರ್ಶನ ಹೋಮ ಜರುಗಿದವು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ನಾರಾಯಣ್ ಆಚಾರ್ಯ ಕಮಲಾಪುರ ಅವರು ಮಾತನಾಡಿ, ಕಳೆದ 24 ವರ್ಷಗಳಿಂದ ಶ್ರೀ ವ್ಯಾಸರಾಜ್ ತೀರ್ಥರ ಆರಾಧನೆಯನ್ನು 1008 ಸತ್ಯಾತ್ಮತೀರ್ಥ ಶ್ರೀಪಾಂದಗಳವರ ಆದೇಶಾನುಗ್ರಹದಿಂದ ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದೇವೆ. ಶ್ರೀಪಾದಂಗಳವರ ಮಂತ್ರಾಕ್ಷತೆ ಬಲದಿಂದ ಇಷ್ಟೆಲ್ಲ ಪ್ರಗತಿಯಾಗಿದ್ದು, ಹೊಸ ಕಟ್ಟಡ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಭಕ್ತಾದಿಗಳು ತನು, ಮನ, ಧನದಿಂದ ಸೇವೆಗೈದು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.
ಪಂಡಿತ್ ಗಿರೀಶಾಚಾರ್ಯ ಅವಧಾನಿ, ಪಂಡಿತ್ ಗೋಪಾಲಾಚಾರ್ಯ ಅಕಮಂಚಿ, ಪಂಡಿತ್ ಬ್ರಹ್ಮಣ್ಯಾಚಾರ್ಯ ಜೋಶಿ, ರವೀಂದ್ರ ಕುಲಕರ್ಣಿ, ಗುರುರಾಜ್ ದೇಸಾಯಿ, ರಾಮಾಚಾರ್ಯ ನಗನೂರ್, ವಿನಾಯಕ್ ಕುಲಕರ್ಣಿ, ವಿನುತ್ ಜೋಶಿ, ಗುರುರಾಜ್ ದೇಶಪಾಂಡೆ, ವೆಂಕಟೇಶ್ ಕುಲಕರ್ಣಿ, ಜಗನ್ನಾಥ್ ಮೊಗರೆ, ಪದ್ಮನಾಭ್ ಆಚಾರ್ಯ ಜೋಶಿ, ಡಾ. ಸಂಜಯ್ ಕುಲಕರ್ಣಿ, ಅನಿಲ್ ಕುಲಕರ್ಣಿ, ಸುರೇಶ್ ಕುಲಕರ್ಣಿ, ರಾಘವೇಂದ್ರ ಆಶ್ರಿತ್, ಬದರಿನಾಥ್ ಬಾಡಗಿ ಸೇರಿದಂತೆ ಅನೇಕ ಭಕ್ತರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.