ವ್ಯಾಸನ ತಾಂಡಾ ಹಲವರಿಗೆ ಜ್ವರ: ಶಾಸಕ ಕರುಣಾಕರ ರೆಡ್ಡಿ ಭೇಟಿ


ಹರಪನಹಳ್ಳಿ.ಡಿ.೧: ತಾಲ್ಲೂಕಿನ ವ್ಯಾಸನ ತಾಂಡಾದಲ್ಲಿ ಹವಾಮಾನ ವೈಪರಿತ್ಯದಿಂದ ಜನರಿಗೆ ಜ್ವರ ಬಾಧೆ ಕಾಣಿಸಿಕೊಂಡಿದ್ದು,  ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿತು.ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ವ್ಯಾಸನ ತಾಂಡಾದಲ್ಲಿ ಜನರಿಗೆ ಜ್ವರ ಬಾಧೆ ಕಾಣಿಸಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಮನೆ ಮನೆಗೂ ಭೇಟಿ ಕೊಟ್ಟು ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದರು.ಗ್ರಾಮದಲ್ಲಿ ಸೊಳ್ಳೆಗಳು ಹೆಚ್ಚಾಗಿರುವ ಕಾರಣ ಫಾಗಿಂಗ್ ಮಾಡಲು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಹೇಳಲಾಗಿದೆ. ಆರೋಗ್ಯ ಸಿಬ್ಬಂದಿ ಮನೆ –ಮನೆಗೂ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸುವಂತೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಬಿಜೆಪಿ ಮುಖಂಡರು ಇದ್ದರು.