ಕೋಲಾರ.ಜು೨೮:ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಶೀಘ್ರ ಪುರ್ಣಗೊಳಿಸಿ ಸಾರ್ವಜನಿಕರಿಗೆ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕೆ.ಸಿ ವ್ಯಾಲಿ ನೀರು ಶುದ್ಧೀಕರಣದ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಜನರಲ್ಲಿನ ತಪ್ಪು ಅಭಿಪ್ರಾಯ ಹೋಗಲಾಡಿಸಿ ಈ ನೀರು ಕೃಷಿ ಯೋಗ್ಯವೆಂಬ ಕುರಿತು ರೈತರಲ್ಲಿ ಅರಿವು ಮೂಡಿಸಬೇಕು ಮತ್ತು ನೀರಿನ ಗುಣಮಟ್ಟ ಆಗಿಂದಾಗ್ಗೆ ಪರಿಶೀಲಿಸಬೇಕು ಎಂದು ಹೇಳಿದರು.
ಯರಗೋಳ್ ಕುಡಿಯುವ ನೀರಿನ ಯೋಜನೆಯಡಿ ಪೈಪ್‌ಲೈನ್ ಅಳವಡಿಸುವ ಕಾರ್ಯದ ಜತೆಗೆ ಅಂತಿಮ ಹಂತದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಕೆ.ಸಿ ವ್ಯಾಲಿ ನೀರು ಯರಗೋಳ್ ಯೋಜನೆಗೆ ಸೇರಿಸುವುದಿಲ್ಲ. ಜನತೆ ನಿಶ್ಚಿಂತೆಯಿಂದ ಯರಗೋಳ್ ಕುಡಿಯುವ ನೀರನ್ನು ಬಳಸಬಹುದಾಗಿದೆ ಎಂದು ಅಭಯ ನೀಡಿದರು.
ಎತ್ತಿನಹೊಳೆ ಕಾಮಗಾರಿಯೂ ಮುಗಿಯುವ ಹಂತಕ್ಕೆ ಬಂದಿದ್ದು ಶೀಘ್ರದಲ್ಲಿ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಅಭಾವ ಕಡಿಮೆಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.