ವ್ಯಾಪಾರ ವಹಿವಾಟಿನಿಂದ ಬದುಕುವ ಕಲೆ,ಲಾಭಗಳಿಕೆಯ ಅರಿವು

ಕೋಲಾರ,ಜು,೨೯:ವ್ಯಾಪಾರ ವಹಿವಾಟು ನಡೆಸುವ ಮೂಲಕ ಸಮಾಜದಲ್ಲಿ ಬದುಕುವ ಕಲೆ ಕಲಿಯುವುದರ ಜತೆಗೆ ಲಾಭ ಸಂಪಾದನೆ ಹೇಗೆ ಸಾಧ್ಯ ಎಂಬುದರ ಅರಿವು ಗಳಿಸಲು ಕಾಲೇಜಿನಲ್ಲಿ ನಡೆದ ‘ಮಾರಾಟಮೇಳ’ ಸ್ಪೂರ್ತಿಯಾಗಿದೆ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಂಗಾಧರರಾವ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾಕಾಲೇಜಿನ ಬಿಬಿಎ,ಬಿಕಾಂ,ಎಂಕಾಂ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಮಾರಾಟದಿನದ ಅಂಗವಾಗಿ ವ್ಯಾಪಾರ ವಹಿವಾಟು ನಡೆಸಲು ತೆರೆದಿದ್ದ ಅಂಗಡಿ ಮಳಿಗೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಾಣಿಜ್ಯ ವಿದ್ಯಾರ್ಥಿನಿಯರಿಗೆ ಇದೊಂದು ಪ್ರಾಯೋಗಿಕ ಅನುಭವವಾಗಿದ್ದು, ಕಾಲೇಜಿನ ಆವರಣದಲ್ಲಿ ತೆರೆದಿರುವ ಅಂಗಡಿಮಳಿಗೆಗಳಲ್ಲಿ ಪಾನಿಪೂರಿ,ಬೇಲ್‌ಪೂರಿ, ಬೋಂಡಾ,ಬಜ್ಜಿ,ಮಸಾಲೆದೋಸೆ,ಪಡ್ಡು,ವಿವಿಧ ತರಕಾರಿಗಳ ಮಾರಾಟದ ಜತೆ ನೃತ್ಯಡಿಜೆ, ದೆವ್ವದ ಕೋಣೆ ವೀಕ್ಷಣೆಗೆ ಟಿಕೆಟ್ ನಿಗಧಿಯೊಂದಿಗೆ ತಲಾ ೧೦ ಸಾವಿರರೂವರೆಗೂ ವಹಿವಾಟು ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಎಂದರು.
ಎಷ್ಟೇ ವ್ಯಾಸಂಗ ಮಾಡಿದರೂ ಬದುಕು ರೂಪಿಸಿಕೊಳ್ಳಲು, ಸಮಾಜದಲ್ಲಿ ಎಲ್ಲರೊಂದಿಗೆ ಬದುಕಲು ಸಾಮಾನ್ಯಜ್ಞಾನದ ಅಗತ್ಯವಿದೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಎಷ್ಟೇ ಸಾಧಕರಾಗಿ ಉನ್ನತ ಹುದ್ದೆಗಳಿಗೆ ಹೋದರೂ, ಜತೆಗೆ ಗೃಹಿಣಿಯೂ ಆಗಿರುವುದರಿಂದ ದಿನನಿತ್ಯದ ವಸ್ತುಗಳನ್ನು ಗುರುತಿಸುವಿಕೆ, ಖರೀದಿ ಬಗ್ಗೆ ಅರಿತುಕೊಳ್ಳುವುದು ಅಗತ್ಯವಿದೆ ಎಂದರು.
ವಾಣಿಜ್ಯ ಶಾಸ್ತ್ರ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಬೇಡಿಕೆಯ ಶಿಕ್ಷಣವಾಗಿದೆ, ಸರ್ಕಾರ ಜಿಎಸ್‌ಟಿ ತೆರಿಗೆ, ಆದಾಯ ತೆರಿಗೆ ಪಾವತಿ ವಿಧಾನ ಬಲಗೊಳ್ಳುತ್ತಿದ್ದಂತೆ ಇಂದು ಅಂಗಡಿ ಮುಂಗಟ್ಟುಗಳು,ಕಂಪನಿಗಳು ಮಾತ್ರವಲ್ಲ ವೈಯಕ್ತಿಕವಾಗಿಯೂ ಆದಾಯ ತೆರಿಗೆ ಇ-ಫೈಲ್ ಮಾಡುವುದು ಸೇರಿದಂತೆ ಅತಿ ಹೆಚ್ಚು ಬೇಡಿಕೆಯ ಕೋರ್ಸಾಗಿದೆ ಎಂದರು.
ಉಪನ್ಯಾಸಕರೂ ವ್ಯಾಪಾರದಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ್ದು, ಇಡೀ ಕಾಲೇಜಿನ ಆವರಣದಲ್ಲಿ ತಿಂಡಿತಿನಿಸು, ವಿವಿಧ ರೀರಿಯ ತರಕಾರಿಗಳು ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ಮಳಿಗೆಗಳು ತಲೆಯೆತ್ತಿದ್ದವು.
ಕಾಲೇಜಿನ ಬಿಬಿಎ,ಬಿಕಾಂ,ಎಂಕಾಂನ ವಾಣಿಜ್ಯ ವಿಭಾಗ ಈ ಮಾರಾಟಮೇಳ ಆಯೋಜಿಸಿದ್ದು, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ವಿ.ರಮೇಶ್, ಬಿಬಿಎ ಮುಖ್ಯಸ್ಥ ಜಿ.ಎಂ.ಪ್ರಕಾಶ್,ವಾಣಿಜ್ಯ ವಿಭಾಗದ ಮುಖ್ಯಸ್ಥ ಕೃಷ್ಣಕುಮಾರ್, ಉಪನ್ಯಾಸಕರಾದ ಡಾ.ಕೆ.ಆರ್.ಮಂಜುಳಾ, ಜಿ.ಮುನಿರಾಜು,ಗೋಪಿನಾಥ್, ಮಾಲತಿ, ಉಮಾ, ರಾಜೇಶ್,ಎನ್.ಪ್ರಕಾಶ್, ಕೆ.ಆರ್.ಗಣೇಶ್ ಮತ್ತಿತರರು ನೇತೃತ್ವ ವಹಿಸಿದ್ದರು.