ವ್ಯಾಪಾರ ವಹಿವಾಟಿಗೆ ಮತ್ತೆ ಕೊರೊನಾ ಕಾರ್ಮೋಡ

ಮುಕುಂದ ಬೆಳಗಲಿ

ಬೆಂಗಳೂರು ನ. ೨೯ : ಮಹಾಮಾರಿ ಕೊರೋನಾದ ಉಪಟಳ ಕಡಿಮೆಯಾಯಿತು ಎಂಬ ವಿಶ್ವಾಸದೊಂದಿಗೆ ಗರಿಗೆದರುತ್ತಿದ್ದ ರಾಜ್ಯದ ವ್ಯಾಪಾರ ವಹಿವಾಟಿನ ಮೇಲೆ ಮತ್ತೆ ಆತಂಕದ ಕಾರ್ಮೋಡ ಕವಿದಿದೆ.
ಕಳೆದ ೨೦ ತಿಂಗಳಿಂದ ನೆಲಕಚ್ಚಿದ್ದ ಪ್ರವಾಸೋದ್ಯಮ, ವ್ಯಾಪಾರ- ವಹಿವಾಟು, ಐಟಿ ಉದ್ಯಮ, ರಿಯಲ್ ಎಸ್ಟೇಟ್, ಹೋಟೆಲ್ ಉದ್ಯಮ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಆಶಾದಾಯಕವಾಗಿ ಪುನರಾರಂಭಿಸಲು ಯೋಚಿಸಿದ್ದ ವ್ಯಾಪಾರಿ – ಉದ್ಯಮಿಗಳ ಕಾರ್ಯತಂತ್ರಕ್ಕೆ ಮತ್ತೆ ಬ್ರೇಕ್ ಬಿದ್ದಿದೆ.
ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಮೊದಲು ಸರಕಾರದ ಕೆಂಗಣ್ಣಿಗೆ ಗುರಿಯಾಗುವ ಮಾಲ್ ಗಳು,ವಿಮಾನಯಾನ, ಖಾಸಗಿ ವಾಣಿಜ್ಯ ಸಂಚಾರ , ಪ್ರವಾಸೋದ್ಯಮ, ಪಬ್ ಮತ್ತು ಬಾರ್ ಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮಾಲೀಕರುಗಳ ಸಂಘಟನೆಗಳು ಈ ವಾರ ಸಭೆ ಕರೆದಿದ್ದು, ಮತ್ತೆ ಬದಲಾಗಬಹುದಾದ ಉದ್ಯೋಗಿಕ ವಾತಾವರಣವನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಚರ್ಚೆ ಆರಂಭಿಸಿವೆ.
ಈ ಮಧ್ಯೆ ವಿಮಾನಯಾನ ಪ್ರಯಾಣಕ್ಕಾಗಿ ಕಾಯ್ದಿರಿಸಿದ್ದ ಟಿಕೆಟ್ ಗಳ ಪೈಕಿ ಕಳೆದ ಎರಡು ದಿನಗಳಲ್ಲಿ ಶೇ. ೨೦ ಪ್ರಯಾಣಿಕರು ತಮ್ಮ ಟಿಕೆಟ್ ಗಳನ್ನು ರದ್ದುಪಡಿಸಿದ್ದಾರೆಂದು ವಿಮಾನಯಾನ ಸಂಸ್ಥೆ ಮೂಲಗಳು ತಿಳಿಸಿವೆ.
ಮಾಲ್ ಗಳ ಆಡಳಿತ ಮಂಡಳಿ ಮತ್ತು ಮಳಿಗೆಗಳ ಮಾಲೀಕರುಗಳ ಸಂಘ ಬರುವ ಬುಧವಾರ ಸಭೆ ಕರೆದಿದ್ದು, ಸಮಗ್ರ ಚರ್ಚೆಗೆ ಸಜ್ಜಾಗಿವೆ.
ನೆರೆಯ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಸರ್ಕಾರ ಹೆಚ್ಚಿನ ನಿರ್ಬಂಧ ಹೇರುವುದರ ಜೊತೆಗೆ ಸ್ಥಳೀಯವಾಗಿ ಸಡಿಲುಕೊಂಡಿದ್ದ ಕೆಲ ನಿರ್ಬಂಧಗಳನ್ನು ಮತ್ತೆ ಕಠಿಣವಾಗಿ ಜಾರಿಗೆ ತರಲು ಮುಂದಾಗಿರುವುದು ಉದ್ಯಮಿಗಳ ನಿದ್ದೆಗೆಡಿಸಿದೆ.
ಜನವರಿ೧ರಿಂದ ಪೂರ್ಣಪ್ರಮಾಣದಲ್ಲಿ ಐಟಿ ಉದ್ಯಮದ ಚಟುವಟಿಕೆಗಳನ್ನು ಆರಂಭಿಸಲು ನಿರ್ಧರಿಸಿದ್ದ ಐಟಿ ಉದ್ಯಮಿಗಳು ಈಗಾಗಲೇ ಹೊಸ ಕಟ್ಟಡಗಳನ್ನು ಬಾಡಿಗೆಗೆ ಪಡೆದುಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದು, ಈಗ ಕೊರೋನಾ ಹೆಚ್ಚಾಗಿರುವುದು ಈ ಉದ್ಯಮಿಗಳನ್ನು ಅತಂತ್ರ ಸ್ಥಿತಿಗೆ ಸಿಲುಕಿಸಿದೆ.
ಕೊರೋನಾ ದಾಳಿಯಿಂದ ಸಂಪೂರ್ಣ ನೆಲಕಚ್ಚಿದ್ದ ಪ್ರವಾಸೋದ್ಯಮ ಈ ಚಳಿಗಾಲದ ಅವಧಿಯಲ್ಲಿ ಚುರುಕುಗೊಳ್ಳಲು ಎಂಬ ನಿರೀಕ್ಷೆಯಲ್ಲಿದ್ದ

ಪ್ರವಾಸೋದ್ಯಮಿಗಳ ಕನಸಿಗೆ ತಣ್ಣೀರೆರಚಿದಂತಾಗಿದೆ.
ಮುಂಗಡವಾಗಿ ಬುಕ್ ಆಗಿದ್ದ ಪ್ಯಾಕೇಜ್ ಟೂರ್ ಗಳನ್ನು ಪ್ರಯಾಣಿಕರು ರದ್ದುಪಡಿಸುತ್ತಿದ್ದು, ಇದರಿಂದ ಪ್ರವಾಸದ ಆಯೋಜಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಎರಡು ತಿಂಗಳಿಂದ ಚುರುಕುಗೊಳ್ಳುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಗರಿ ಗದರುತ್ತಿದ್ದ ಪಬ್ ಮತ್ತು ಬಾರ್ ಗಳು ಆತಂಕದಿಂದ ಎದುರು ನೋಡುತ್ತೇವೆ.
ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳು ಗೊಂದಲಕ್ಕೀಡಾಗಿವೆ.

ಇನ್ನು ಈ ವರ್ಷವೂ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಗಳಿಗೆ ಈ ಬೆಳವಣಿಗೆಗಳಿಂದ ಹಿನ್ನಡೆಯಾಗಿದೆ.
ಜಾತ್ರಾ ಮಹೋತ್ಸವಗಳು ಹಾಗೂ ಧಾರ್ಮಿಕ ಸಮಾರಂಭಗಳಿಗೆ ಬ್ರೇಕ್ ಬೀಳುವ ಸಾಧ್ಯತೆಗಳಿದ್ದು, ಮಠಾಧೀಶರುಗಳು ಹಾಗೂ ಧಾರ್ಮಿಕ ಮುಖಂಡರುಗಳು ಕಾಯ್ದು ನೋಡುವ ಕ್ರಮಕ್ಕೆ ಮುಂದಾಗಿದ್ದಾರೆ.
ಮತ್ತೆ ಲಾಕ್ ಡೌನ್ ಆಗುವ ಸಾಧ್ಯತೆಗಳು ಕಡಿಮೆ ಇದ್ದರೂ ನಿರ್ಬಂಧಗಳು ಕಠಿಣ ವಾಗುವ ಸಾಧ್ಯತೆಗಳಿರುವುದರಿಂದ ವ್ಯಾಪಾರ ವಹಿವಾಟುಗಳನ್ನು ಪುನಶ್ಚೇತನಗೊಳಿಸುವ ಎಲ್ಲಾ ಯೋಜನೆಗಳಿಗೆ ಹಿನ್ನಡೆಯಾಗಿದೆ.