ವ್ಯಾಪಾರಿ ಮಳಿಗೆಗಳಿಗೆ ಸೀಲ್‌ಡೌನ್!

ದೇವದುರ್ಗ: ಮಹಾಮಾರಿ ಕರೊನಾ ಎರಡನೇ ಅಲೆ ತಡೆಯಲು ಸರ್ಕಾರ ಮೇ ೪ರವರೆಗೆ ಸೆಮಿ ಲಾಕ್‌ಡೌನ್ ಘೋಷಿಸಿದ್ದು, ತಾಲೂಕಿನಲ್ಲಿ ವ್ಯಾಪಾರಿಗಳಿಂದ ಸ್ಪಂದನೆ ಸಿಗದ ಕಾರಣ ಪುರಸಭೆ ಕಠಿಣಕ್ರಮ ಕೈಗೊಳ್ಳುತ್ತಿದೆ.
ಕಿರಾಣಿ ಅಂಗಡಿ, ಮೆಡಿಕಲ್, ಆಸ್ಪತ್ರೆ, ಹಾಲು, ಪೆಟ್ರೋಲ್ ಬಂಕ್ ಸೇರಿ ಅಗತ್ಯ ಸೇವೆ ಒದಗಿಸುವ ಮಳಿಗೆಗಳಿಗೆ ಬೆಳಗ್ಗೆ ಮಧ್ಯಾಹ್ನ ೨ರವರೆಗೆ ಅವಕಾಶ ನೀಡಲಾಗಿದೆ. ಇದೇ ನೆಪದಲ್ಲಿ ಇತರ ಮಳಿಗಳು ತೆರೆದಿದ್ದು ಪುರಸಭೆ ಸಿಬ್ಬಂದಿ ಮೌಕಿಕವಾಗಿ ಎಚ್ಚರಿಸಿದರೂ ವ್ಯಾಪಾರಿಗಳು ಕ್ಯಾರೆ ಎನ್ನುತ್ತಿಲ್ಲ. ಸಿಬ್ಬಂದಿ ಮುಂದೆ ಹೋಗುತ್ತಿದ್ದಂತೆ ಹಿಂದಿನಿಂದ ಮಳಿಗೆ ಮರು ಓಪನ್ ಮಾಡುತ್ತಿದ್ದಾರೆ.
ಸೆಮಿಲಾಕ್‌ಡೌನ್ ಯಶಸ್ವಿಗೆ ಟೊಂಕಕಟ್ಟಿನಿಂತಿರುವ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೀಲ್‌ಡೌನ್ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆಯಿಂದ ನೂರಾರು ಮಳಿಗೆಗಳಿಗೆ ಸೀಲ್‌ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಮಳಿಗೆ ಹೊರತುಪಡಿಸಿ ಉಳಿದವುಗಳಿಗೆ ಸೀಲ್‌ಡೌನ್ ಮಾಡುತ್ತಿದ್ದಾರೆ. ಮೇ ೪ರವರೆಗೆ ಮಳಿಗೆ ಆರಂಭಿಸದಂತೆ ಎಚ್ಚರಿಕೆ ನೀಡಿದ್ದು, ನಿಯಮ ಮೀರಿದರೆ ಪ್ರಕರಣ ದಾಖಲಿಸಲು ಮುಂದಾಗಿದೆ.
ಇಲ್ಲಿನ ಕಟಕರ ಕಟ್ಟೆ, ಮಹಾತ್ಮಗಾಂಧಿ ವೃತ್ತ, ಬಂಗಾರ ಬಜಾರ್ ಸೇರಿ ವಿವಿಧೆಡೆ ಪುರಸಭೆ ಸಿಬ್ಬಂದಿ ಸೀಲ್‌ಡೌನ್ ಮಾಡುತ್ತಿದ್ದಾರೆ. ಬಂಗಾರದಂಗಡಿ, ಬಟ್ಟೆಮಳಿಗೆ, ಚಪ್ಪಲಿ ಅಂಗಡಿ, ಫರ್ನಿಚರ್‍ಸ್ ಮಳಿಗೆ, ಸೈಬರ್ ಕಂಪ್ಯೂಟರ್ ಸೇರಿ ಬಹುತೇಕ ವಾಣಿಜ್ಯ ಮಳಿಗೆಗಳಿಗೆ ಬೀಗಜಡಿದು ಸೀಲ್‌ಡೌನ್ ಮಾಡುತ್ತಿದ್ದಾರೆ.
ಸೆಮಿಲಾಕ್‌ಡೌನ್ ಹಿನ್ನೆಲೆ ವ್ಯಾಪಾರಿ ಮಳಿಗೆಗಳಿಗೆ ಸೀಲ್‌ಡೌನ್ ಮಾಡಲು ತೆರಳಿದ್ದ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ವ್ಯಾಪಾರಿಗಳು ವಾಗ್ವಾದ ನಡೆಸಿದರು. ಪಟ್ಟಣದಲ್ಲಿ ಸುಮಾರು ೨ಸಾವಿರ ಮಳಿಗೆಗಳಿದ್ದು, ಬಹುತೇಕ ಸೀಲ್‌ಡೌನ್ ಮಾಡಲು ಪುರಸಭೆ ಮುಂದಾಗಿದೆ. ಸೀಲ್‌ಡೌನ್ ಮಾಡುವುದಾದರೆ ಎಲ್ಲ ಅಂಗಡಿಗಳಿಗೆ ಮಾಡಿ. ಕೆಲವು ಬಿಟ್ಟು, ಬಡವರು ಸಣ್ಣಪುಟ್ಟ ಅಂಗಡಿಗಳಿಗೆ ಸೀಲ್‌ಡೌನ್ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿ ಮಾತಿನ ಚಕಮಕಿ ನಡೆಸಿದರು. ಮೇಲಿನ ಅಧಿಕಾರಿಗಳ ಆದೇಶ ನಾವು ಪಾಲಿಸುತ್ತಿದ್ದು, ಅವರ ಜತೆ ಮಾತನಾಡಿ ಎಂದು ಸಿಬ್ಬಂದಿ ಸಮಜಾಯಿಸಿ ನೀಡಿದರು.

ಕೋಟ್=====
ಮೇ ೪ರವರೆಗೆ ವ್ಯಾಪಾರಿ ಮಳಿಗೆ ತೆರೆಯದಂತೆ ಮಾಲೀಕರಿಗೆ ಸೂಚನೆ ನೀಡಿದರೂ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವಶ್ಯ ವಸ್ತುಗಳ ಮಾರಾಟ ಮಳಿಗೆ ಹೊರತುಪಡಿಸಿ ಉಳಿದ ಮಳಿಗೆಗಳಿಗೆ ಸೀಲ್‌ಡೌನ್ ಮಾಡಿದ್ದೇವೆ. ನಿಯಮ ಮೀರಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ.
| ಶರಣಪ್ಪ
ಪುರಸಭೆ ಮುಖ್ಯಾಧಿಕಾರಿ