ವ್ಯಾಪಾರಿ ಪುರಸಭೆ ಅಧಿಕಾರಿ ನಡುವೆ ಜಟಾಪಟಿ

ದೇವದುರ್ಗ.ಏ.೧೭- ಮಹಾಮಾರಿ ಕರೂನಾ ಎರಡನೇ ಅಲೆ ತಡೆಯಲು ಜಿಲ್ಲಾಧಿಕಾರಿ ತಾಲೂಕಿನ ಎಲ್ಲಾ ವಾರದ ಸಂತೆಗಳನ್ನು ನಿಷೇಧಿಸಿದ್ದಾರೆ. ನಿಯಮ ಪಾಲಿಸಲು ಹೋದ ಪುರಸಭೆ ಅಧಿಕಾರಿಗಳಿಗೆ, ವ್ಯಾಪಾರಿಗಳು ಮಾನವೀಯತೆ ಪಾಠ ಮಾಡಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಪ್ರತಿ ಶನಿವಾರ ಇಲ್ಲಿನ ಮಿನಿವಿಧಾನಸೌಧದ ಮುಂಭಾಗದಲ್ಲಿ ಭರ್ಜರಿ ಸಂತೆ ನಡೆಯುತ್ತದೆ. ತರಕಾರಿ ಸೇರಿ ವಿವಿಧ ಜೀವನೋಪಯೋಗಿ ವಸ್ತುಗಳ ಮಾರಾಟ, ಖರೀದಿ ನಡೆಯುತ್ತಿದ್ದು ಸಾವಿರಾರು ಜನರು ಸೇರುತ್ತಾರೆ. ಇದರಿಂದ ಕರೊನಾ ಹರಡುವ ಸಾಧ್ಯತೆ ಇದ್ದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಸಂತೆ ನಿಷೇಧ ಮಾಡಿದ್ದಾರೆ. ಪುರಸಭೆ ಸಿಬ್ಬಂದಿ ಎರಡು ದಿನಗಳಿಂದ ಸಂತೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಆದರೂ ಸಣ್ಣ ಪುಟ್ಟ ವ್ಯಾಪಾರಿಗಳು, ತಳ್ಳುವ ಬಂಡಿ, ಸೇರಿ ಬಡ ವ್ಯಾಪಾರಿಗಳು ಸ್ವಲ್ಪ ಮಟ್ಟಿಗೆ ದುಡಿಯಲು ಸಂತೆಗೆ ಬಂದಿದ್ದು, ಮಿನಿವಿಧಾನಸೌಧ, ಎಪಿಎಂಸಿ ಆವರಣ, ಸಿರವಾರ ಕ್ರಾಸ್ ನಲ್ಲಿ ವ್ಯಾಪಾರ ನಡೆಸಿದ್ದಾರೆ.
ಮಿನಿವಿಧಾನಸೌಧ ಮುಂಭಾಗದಲ್ಲಿ ಸಂತೆ ತಡೆಯಲು ಪುರಸಭೆ ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಎರಡು ಟ್ರ್ಯಾಕ್ಟರ್ ಗಳನ್ನು ನಿಲ್ಲಿಸಿದ್ದಾರೆ. ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತ, ಹಾಸ್ಟೆಲ್ ಮುಂಭಾಗದಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ವ್ಯಾಪಾರಿಗಳು ಬರದಂತೆ ತಡೆದಿದ್ದಾರೆ. ಮಧ್ಯಾಹ್ನ ವಿವಿಧ ವಸ್ತುಗಳನ್ನು ಮಾರಾಟ ಮಾಡಲು ಬಂದ ಸಣ್ಣ ಪುಟ್ಟ ವ್ಯಾಪಾರಿಗಳು, ಮಿನಿವಿಧಾನಸೌಧದ ಮುಂಭಾಗ ಕುಳಿತಿದ್ದಾರೆ. ಸಂತೆ ನಿಷೇಧ ಮಾಡಿದ್ದರೂ ವ್ಯಾಪಾರ ಮಾಡುವುದು ಸರಿಯಲ್ಲ ಎಂದು ತಿಳಿಹೇಳಲು ಬಂದು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ವ್ಯಾಪಾರಿಗಳು ವಾಗ್ವಾದಕ್ಕೆ ಇಳಿದಿದ್ದಾರೆ. ಸಂತೆ ನಡೆಯದಿದ್ದರೆ ನಾವು ಜೀವನ ಮಾಡುವುದು ಹೇಗೆ? ಸಂತೆ ನಂಬಿಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ. ರೂಲ್ಸ್ ನೆಪದಲ್ಲಿ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಬೇಡಿ ಎಂದು ವ್ಯಾಪಾರಿಗಳು ಪುರಸಭೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಮೇಲಧಿಕಾರಿಗಳ ಸೂಚನೆ ಹಿನ್ನೆಲೆ ಹಾಗೂ ಮಾನವೀಯ ದೃಷ್ಟಿಯಿಂದ, ದೈಹಿಕ ಅಂತರ ಕಾಪಾಡಿಕೊಂಡು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ವ್ಯಾಪಾರ ನಡೆಸಲು ಕೊನೆಗೂ ಅವಕಾಶ ನೀಡಲಾಯಿತು. ಇದರಿಂದ ವ್ಯಾಪಾರಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟರು.
ನೀವು ಏನಾದರೂ ಮಾಡಿ
ಇದಕ್ಕೂ ಮುನ್ನ ಸಂತೆ ನಡೆಸಲು ಅವಕಾಶ ನೀಡುವಂತೆ ಕೋರಿ ವ್ಯಾಪಾರಿಗಳು ಪಟ್ಟಣದ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಧಿಕಾರಿಗಳಿಗೆ ಮನವಿ ಮಾಡಿದರು. ಸಂತೆ ನಡೆಸಲು ಸರ್ಕಾರ ಅನುಮತಿ ನೀಡಿಲ್ಲ. ಇದರಲ್ಲಿ ನಾವು ಏನು ಮಾಡಲು ಬರುವುದಿಲ್ಲ. ಪುರಸಭೆ ಅಧಿಕಾರಿಗಳ ಜತೆ ಮಾತನಾಡಿ ಏನಾದರೂ ಮಾಡಿ ಎಂದು ಪೊಲೀಸ್ ಅಧಿಕಾರಿಗಳು ಕೈಚೆಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಒಂದೆಡೆ ಕರೊನಾ ರೂಲ್ಸ್, ಇನ್ನೊಂದೆಡೆ ಮಾನವೀಯತೆ ನಡುವೆ ಪೊಲೀಸರು ಅಸಾಯಕರಾಗಿದ್ದರು.
ಕೊಟ್——
ಕರೋನಾ ತಡೆಗೆ ಸರ್ಕಾರದ ಆದೇಶ ಪ್ರಕಾರ ಪಟ್ಟಣದ ಶನಿವಾರಸಂತೆ ಸೇರಿ, ಎಲ್ಲಾ ಸಂತೆಗಳನ್ನು ನಿಷೇಧ ಮಾಡಲಾಗಿದೆ. ನಿಯಮ ಪಾಲನೆಗೆ ಪುರಸಭೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಾನವೀಯ ದೃಷ್ಟಿಯಿಂದ ಅಲ್ಲಲ್ಲಿ, ದೈಹಿಕ ಅಂತರ ಕಾಪಾಡಿಕೊಂಡು ಸಣ್ಣ ಪುಟ್ಟ ವ್ಯಾಪಾರಿಗಳು ವ್ಯವಹಾರ ನಡೆಸಲು ಅವಕಾಶ ನೀಡಲಾಗಿದೆ.
! ಶರಣಪ್ಪ
ಪುರಸಭೆ ಮುಖ್ಯಾಧಿಕಾರಿ