ವ್ಯಾಪಾರಿ ಕೇಂದ್ರ ಬಂದ್ : ಬಸ್ ಸಂಚಾರ ಸ್ಥಗಿತ – ಮೊದಲ ದಿನ ಓಡಾಟ ನಿಯಂತ್ರಣ ಯಶಸ್ವಿ

ಕೊರೊನಾ ಲಾಕ್ ಡೌನ್ : ರಸ್ತೆಗಳು ಖಾಲಿ ಖಾಲಿ – ಹೊರಗೆ ಬಂದವರಿಗೆ ಲಾಠಿ ಬಿಸಿ

 • ರಾಯಚೂರು.ಏ.೨೮- ವರ್ಷದ ನಂತರದ ಎರಡನೇ ಕೊರೊನಾ ಅಲೆಯ ಲಾಕ್ ಡೌನ್ ಇಂದಿನಿಂದ ಆರಂಭಗೊಂಡಿದ್ದು, ಲಾಕ್ ಡೌನ್‌ನ ಪ್ರಥಮ ದಿನ ಜಿಲ್ಲೆಯಲ್ಲಿ ಸ್ತಬ್ಧಗೊಂಡು ಮುಖ್ಯ ರಸ್ತೆಗಳು ಮತ್ತು ವ್ಯಾಪಾರಿ ಕೇಂದ್ರಗಳು ಜನರಿಲ್ಲದೇ, ಬಿಕೋ ಎನ್ನುವ ಚಿತ್ರ ಎಲ್ಲೆಡೆ ಕಂಡು ಬಂದಿತು.
  ಮುಂಜಾನೆ ೬ ಗಂಟೆಯಿಂದ ೧೦ ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಇದಾದ ನಂತರ ೧೦ ಗಂಟೆಯಿಂದ ಲಾಕ್ ಡೌನ್ ಪ್ರಕ್ರಿಯೆ ಆರಂಭಗೊಂಡಿತು. ಪೂರ್ವ ಮಾಹಿತಿ ಹಿನ್ನೆಲೆಯಲ್ಲಿ ಬಹುತೇಕ ಜನ ೧೦ ಗಂಟೆಯ ನಂತರ ಹೊರಗೆ ಕಾಣಿಸದೇ, ಮನೆ ಸೇರಿಕೊಂಡರು. ಸರ್ಕಾರಿ ಇಲಾಖೆಯ ಅಧಿಕಾರಿಗಳು ಹೊರತು ಪಡಿಸಿದರೇ, ಮತ್ಯಾರ ಓಡಾಟ ಕಂಡು ಬರಲಿಲ್ಲ. ಆದರೂ, ಅಲ್ಲಲ್ಲಿ ಅನಗತ್ಯವಾಗಿ ರಸ್ತೆಗಳಲ್ಲಿ ಕಂಡುಬಂದವರಿಗೆ ಪೊಲೀಸರಿಗೆ ಲಾಠಿ ಮೂಲಕವೇ ಪಾಠ ಕಲಿಸಿದ ಘಟನೆಗಳು ನಡೆದವು.
  ಅಂಬೇಡ್ಕರ್ ವೃತ್ತ, ಬಜಾರ್ ಹಾಗೂ ಬಸ್ ನಿಲ್ದಾಣ, ಚಂದ್ರಮೌಳೇಶ್ವರ ವೃತ್ತ, ಗಂಜ್ ಸೇರಿದಂತೆ ವಿವಿಧೆಡೆ ಜನರು ಪೊಲೀಸ್ ಲಾಠಿ ರುಚಿಯೊಂದಿಗೆ ಮನೆ ಸೇರುವಂತಾಯಿತು. ಕೆಲವರು ವಿರುದ್ಧ ಪ್ರಕರಣ ದಾಖಲಿಸಿದಂತಹ ಘಟನೆಗಳು ನಡೆದಿವೆ. ಬೆಳಗಿನ ೧೦ ಗಂಟೆಯಿಂದ ರಸ್ತೆಗಳು ಜನರ ಸಂಚಾರ ಮುಕ್ತಗೊಂಡು ದೂರದವರೆಗೂ ಖಾಲಿ ಖಾಲಿಯಾಗಿ ಕಂಡು ಬಂದವು. ದಿನ ನಿತ್ಯ ಜನರಿಂದ ಟ್ರಾಫಿಕ್ ಜಂಜಾಟ ಎದುರಿಸುತ್ತಿದ್ದ ರಸ್ತೆಗಳಲ್ಲಿ ಇಂದು ಜನರೇ ಇಲ್ಲದ ಅಪರೂಪ ಮತ್ತೊಮ್ಮೆ ಕಾಣುವಂತಾಯಿತು.
  ಕಳೆದ ವರ್ಷ ಇದೇ ಅವಧಿಯಲ್ಲಿ ಲಾಕ್ ಡೌನ್ ಅನುಷ್ಠಾನ ಜಿಲ್ಲೆಯ ಎಲ್ಲಾ ರಸ್ತೆಗಳು ಮಾರುಕಟ್ಟೆ ಹಾಗೂ ಇತರೆ ಪ್ರಮುಖ ಸ್ಥಳಗಳು ನಿರ್ಜನವಾಗಿದ್ದವು. ಕೊರೊನಾ ಎರಡನೇ ಅಲೆ ಈಗ ಮತ್ತೇ ಅಂತಹದ್ದೇ ಪರಿಸ್ಥಿತಿಯನ್ನು ಜನ ಕಾಣುವಂತೆ ಮಾಡಿದೆ. ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಕಳೆದ ಎರಡು ದಿನಗಳ ಹಿಂದೆ ಲಾಕ್ ಡೌನ್ ಘೋಷಿಸಲಾಗಿತ್ತು. ನಿನ್ನೆ ರಾತ್ರಿ ೯ ಗಂಟೆಯಿಂದ ಈ ಲಾಕ್ ಡೌನ್ ಆರಂಭಗೊಂಡಿತು.
  ಇಂದು ಮುಂಜಾನೆ ನಾಲ್ಕು ತಾಸು ಬಿಡುವಿನ ಸಮಯ ಹೊರತು ಪಡಿಸಿ, ಎಲ್ಲವೂ ಬಂದ್ ಮಾಡಲಾಗಿದೆ. ಪೊಲೀಸರು ನಗರದ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್ ಮೂಲಕ ಜನ ಸಂಚಾರ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಿ, ಮನೆಯಲ್ಲಿ ಕೂಡುವಂತಾಗಿದೆ. ಈ ಲಾಕ್ ಡೌನ್‌ನ ೧೪ ದಿನಗಳು ಕೊರೊನಾ ಮಹಾಮಾರಿಯ ಸಂಕಷ್ಟ ನಿವಾರಣೆಗೆ ಪೂರಕವಾಗುವ ನಿರೀಕ್ಷೆ ಹೊಂದಲಾಗಿದೆ. ಒಂದು ವರ್ಷದ ಹಿಂದಿನ ಲಾಕ್ ಡೌನ್‌ನ ನೆನಪು ಮರೆಯುವ ಮುಂಚೆ ಮತ್ತೇ ಈಗ ಈ ಲಾಕ್ ಡೌನ್ ಒಕ್ಕರಿಸಿರುವುದು ಜನ ಆರ್ಥಿಕವಾಗಿ ತತ್ತರಿಸುವಂತೆ ಮಾಡಿದೆ.
  ಸಾರಿಗೆ ಬಸ್ ಸಂಪೂರ್ಣ ಬಂದ್, ಖಾಸಗಿ ವಾಹನಗಳು ಸ್ಥಗಿತಗೊಂಡಿವೆ. ಅಗತ್ಯ ವಸ್ತು ಸಾಗಾಣಿಕೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಕಟ್ಟಡ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಲ್ಲಿ ಕೂಲಿಕಾರರ ಓಡಾಟ ಮಾತ್ರ ಸ್ಪಷ್ಟವಾಗಿ ಕಾಣುತ್ತಿತ್ತು. ಆದರೂ, ಅಲ್ಲಲ್ಲಿ ಆಟೋಗಳ ಸಂಚಾರ ಕಂಡು ಬಂದಿತು. ಪೊಲೀಸರು ಲಾಠಿ ಹಿಡಿದು ಬೆನ್ನತ್ತಿ ಭಾರೀಸುವ ಮೂಲಕ ಮನೆ ಸೇರುವಂತೆ ಮಾಡಿದರು. ಕೊರೊನಾ ಮಹಾಮಾರಿಯ ಸಂಕಷ್ಟದ ಹಿನ್ನೆಲೆಯಲ್ಲಿ ಹೊರಗೆ ಬಾರದಿರುವಂತೆ ಪದೇ ಪದೇ ಸೂಚಿಸಿದರೂ, ಜನ ಕೇಳದಿರುವ ಹಿನ್ನೆಲೆಯಲ್ಲಿ ಲಾಠಿ ರುಚಿ ಮೂಲಕ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಬೇಕಾಯಿತು.
  ಬಿರು ಬಿಸಿಲಿನಲ್ಲಿ ಪೊಲೀಸರು ಮಾತ್ರ ಅವಿರತವಾಗಿ ಕಾರ್ಯದಲ್ಲಿ ತೊಡಗಿದ್ದರು. ಜನರು ಸಂಚರಿಸದಂತೆ ತಡೆಯುವ ಮಹಾ ಸಂಗ್ರಾಮಕ್ಕೆ ಹಣಿಯಾಗಿ ನಿಂತಿದ್ದರು. ಒಂದೆಡೆ ಬೇವರು ಸುರಿದು ದಣಿವಾದರೂ, ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ವಾರಿಯರ್ಸ್ ದಣಿವರಿಯದೇ ಕರ್ತವ್ಯ ನಿರ್ವಹಿಸುತ್ತಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದ್ದರು. ಮುಂದಿನ ೧೪ ದಿನಗಳ ಕಾಲ ಲಾಕ್ ಡೌನ್ ಇದೇ ರೀತಿಯಲ್ಲಿರುವುದರಿಂದ ಜನ ಹೊರಗೆ ಬಾರದೇ, ತಮ್ಮನ್ನು ತಾವು ಮನೆಗಳಿಗೆ ಸೀಮಿತಗೊಳಿಸಿಕೊಂಡು ಆರೋಗ್ಯ ಮತ್ತು ಜೀವ ರಕ್ಷಿಸಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ.
  ಎಲ್ಲಾ ಆಸ್ಪತ್ರೆಗಳು ತುಂಬಿ ಹೋಗಿದ್ದರಿಂದ ಇನ್ನೂ ರೋಗಿಗಳ ಸಂಖ್ಯೆ ಹೆಚ್ಚಾದರೇ, ಜೀವಹಾನಿಯ ನಷ್ಟ ಜನರಿಗೆ ಎನ್ನುವ ಸತ್ಯ ಅರಿತು. ಮನೆಗಳಲ್ಲಿಯೇ ಉಳಿದು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಸಹಕರಿಸುವ ಮೂಲಕ ಈ ಮಹಾಮಾರಿಯ ಯುದ್ಧ ಗೆಲುವಿಗೆ ಸಾಥ್ ನೀಡುವ ಅಗತ್ಯವಿದೆ.