ವ್ಯಾಪಾರಿಗಳ ಬದುಕಿಗೆ ಬೆಂಗಾವಲಾದ ಜಾತ್ರೆಗಳು

ದೇವದುರ್ಗ.ಡಿ.೦೭-ಕರೊನಾ ಲಾಕ್‌ಡೌನ್‌ನಿಂದ ಎರಡು ವರ್ಷಗಳಿಂದ ತತ್ತರಿಸಿದ್ದ ಅಲೆಮಾರಿ ವ್ಯಾಪಾರಿಗಳಿಗೆ, ನಿಯಮ ಸಡಿಲಿಕೆ ಹೊಸ ಬದುಕು ರೂಪಿಸಿದೆ.
ಜಾತ್ರೆ, ಉರುಸ್, ಉತ್ಸವ, ಸೇವಾ ನಂಬಿ ಬದುಕು ಕಟ್ಟಿಕೊಂಡಿದ್ದ ಅಲೆಮಾರಿ ವ್ಯಾಪಾರಿಗಳು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಾತ್ರೆಗಳೇ ವ್ಯಾಪಾರಿಗಳಿಗೆ ಮೂಲ ಆದಾಯ. ಜಾತ್ರೆಗೆ ತೆರಳುವ ವ್ಯಾಪಾರಿಗಳು ೮-೧೦ದಿನ ಟೆಂಟ್‌ಹಾಕಿ ವಿವಿಧ ವ್ಯಾಪಾರ ಮಾಡುತ್ತಾರೆ. ೨ವರ್ಷಗಳಿಂದ ಜಾತ್ರೆಗಳಿಗೆ ಅವಕಾಶ ನೀಡದ ಕಾರಣ ಜೀವನ ಕಷ್ಟವೆನಿಸಿತ್ತು.
ಜಿಲ್ಲೆ ಸೇರಿ ರಾಜ್ಯದಲ್ಲಿ ಕರೊನಾ ಸೋಂಕು ಇಳಿಮುಖವಾಗಿದ್ದು, ಜಾತ್ರೆ ನಡೆಸಲು ಸರ್ಕಾರ ಮೌಖಿಕವಾಗಿ ಅನುಮತಿ ನೀಡಿದೆ. ಇದರಿಂದ ತಾಲೂಕು ಸೇರಿ ಜಿಲ್ಲೆ, ಹೊರಜಿಲ್ಲೆಗಳಲ್ಲಿ ನಡೆಯವ ಜಾತ್ರೆಗಳಿಗೆ ವ್ಯಾಪಾರಿಗಳು ತೆರಳಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮಾನವೀಯ ದೃಷ್ಟಿಯಿಂದ ಅಧಿಕಾರಿಗಳು ಕೂಡ ವ್ಯಾಪಾರ ನಡೆಸಲು ಅನುಮತಿ ನೀಡಿರುವುದು ಅಲೆಮಾರಿ ವ್ಯಾಪಾರಿಗಳಿಗೆ ಅನುಕೂಲವಾಗಿದೆ.
ವಾರದ ಹಿಂದೆ ಪಟ್ಟಣದ ಶ್ರೀಸಿದ್ಧರಾಮೇಶ್ವರ ಜಾತ್ರೆ, ಗಲಗ ಶ್ರೀಚನ್ನಬಸವೇಶ್ವರ ಜಾತ್ರೆ ನಡೆದಿದ್ದು, ಅಲೆಮಾರಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಡಿ.೮ರಂದು ಅರಕೇರಾ ಸೂಗೂರೇಶ್ವರ ಜಾತ್ರೆ, ಮುಂದಿನ ದಿನಗಳಲ್ಲಿ ಗಬ್ಬೂರು ಶ್ರೀಬೂದಿಬಸವೇಶ್ವರ, ಸುಲ್ತಾನಪುರದ ಶ್ರೀಪಂಚಾಕ್ಷರಿ, ಜಾಲಹಳ್ಳಿ ಶ್ರೀಜಯಶಾಂತಲಿಂಗೇಶ್ವರ ಜಾತ್ರೆ ಸೇರಿ ವಿವಿಧ ಜಾತ್ರೆಗಳು ನಡೆಯಲಿದ್ದು, ಅನುಮತಿ ನೀಡಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬಾಕ್ಸ್=======
ಯಾರ್‍ಯಾರಿಗೆ ಅನುಕೂಲ
ಜಾತ್ರೆಗಳಿಗೆ ಅನುಮತಿ ನೀಡಿದರೆ ಭಕ್ತರು ಮಾತ್ರವಲ್ಲ ವ್ಯಾಪಾರಿಗಳೂ ಬದುಕಟ್ಟಿಕೊಳ್ಳಲಿದ್ದಾರೆ. ಜಿಲೇಬಿ, ಮಿರ್ಚಿ ಅಂಗಡಿ, ತೆಂಗಿನಕಾಯಿ ವ್ಯಾಪಾರಿಗಳು, ಪಳಾರ-ಮಂಡಾಳು ವ್ಯಾಪಾರಿಗಳು, ಸಿಹಿತಿನಿಸು ವ್ಯಾಪಾರಿಗಳು, ಮಕ್ಕಳ ಆಟಿಕೆ ಸಾಮಗ್ರಿ ಮಾರುವವರು, ಜೋಗೇರ್, ಮಹಿಳೆಯರ ಅಲಂಕಾರಿ ವಸ್ತು ಮಾರುವವರು, ಸಣ್ಣ ಹೋಟೆಲ್, ಕಿರಾಣ ಅಂಗಡಿ, ಟೀ ಸ್ಟಾಲ್, ಯುವಕರ ಅಲಂಕಾರಿ ವಸ್ತು ಮಾರುವವರು, ಕಬ್ಬಿನ ಜೂಸ್, ಐಸ್‌ಕ್ರೀಂ ವ್ಯಾಪಾರಿಗಳು, ಒಣಕುರುಕಲು ತಿಂಡಿ ವ್ಯಾಪಾರಿಗಳು, ಹಣ್ಣಿನ ವ್ಯಾಪಾರ ಸೇರಿ ವಿವಿಧ ಅಲೆಮಾರಿ ವ್ಯಾಪಾರಿಗಳಿಗೆ ಜಾತ್ರೆಗಳು ಬದುಕು ರೂಪಿಸಿವೆ.

ಕೋಟ್====
ಎರಡು ವರ್ಷದಿಂದ ಕರೊನಾ ಅಂಥ ಹೇಳಿ ಲಾಕ್‌ಡೌನ್ ಮಾಡಿದ್ದರಿಂದ ಜಾತ್ರೆ ನಡೆಯದೆ ನಮ್ಮ ಬದುಕು ನಡೆಸುವುದೇ ಕಷ್ಟವಾಗಿತ್ತು. ಜಾತ್ರೆಗಳೇ ನಮ್ಮ ವ್ಯಾಪಾರಕ್ಕೆ ಆಧಾರ. ಅಲೆಮಾರಿ ವ್ಯಾಪಾರ ನಂಬಿ ಜೀವನ ನಡೆಸುತ್ತಿದ್ದು, ಬೇರೆ ವ್ಯಾಪಾರಿ ಮಾಡಲು ಬರಲ್ಲ. ಜಾತ್ರೆಗಳಿಗೆ ಅನುಕೂಲ ಮಾಡಿಕೊಡಬೇಕು.
| ರಂಗಪ್ಪ, ಶಿವಣ್ಣ
ಅಲೆಮಾರಿ ವ್ಯಾಪಾರಿಗಳು