ವ್ಯಾಪಾರಿಗಳಿಗೆ ಬೆಳಿಗಿನ ೬ – ೧೦ ಗಂಟೆವರೆಗೆ ಅವಕಾಶ ನೀಡಲು ಮನವಿ

ರಾಯಚೂರು.ಜೂ.೦೯- ಕೊರೊನಾ ಲಾಕ್ ಡೌನ್ ಜೂ.೭ ರ ನಂತರ ಸಡಲಿಗೊಳಿಸುವುದಾಗಿ ಹೇಳಲಾಗಿತ್ತು. ಆದರೆ, ಈ ಬಗ್ಗೆ ಸಂಬಂಧಪಟ್ಟ ಸರ್ಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯೆಯಿಂದ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿ ಭಾರೀ ನಷ್ಟಕ್ಕೆ ಗುರಿಯಾಗಿದ್ದು, ತಕ್ಷಣವೇ ಬೆಳಗಿನ ೬ ಗಂಟೆಯಿಂದ ೧೦ ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆ ಮತ್ತು ನಗರದ ವ್ಯಾಪಾರಿಗಳು ಪ್ರತಿನಿತ್ಯ ಸ್ಥಳೀಯ ನಾಯಕರನ್ನು ಸಂಪರ್ಕಿಸಿ ಗೋಳು ತೋಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್‌ನಿಂದಾಗಿ ವ್ಯಾಪಾರ ವಹಿವಾಟು ನಿಂತು ಭಾರೀ ನಷ್ಟಕ್ಕೆ ಕಾರಣವಾಗಿದೆ. ಈ ವ್ಯಾಪಾರಿಗಳನ್ನು ಕರೆದು, ಅವರ ಸ್ಥಿತಿಗತಿಯನ್ನು ಕೇಳುವ ನಾಯಕತ್ವದ ಕೊರತೆಯಿಂದ ನಗರ ಮತ್ತು ಜಿಲ್ಲೆಯಲ್ಲಿ ವ್ಯಾಪಾರಿಗಳ ಪರಿಸ್ಥಿತಿ ದಾರುಣವಾಗಿದೆ.
ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದ ನಂತರ ಯಾವ ರೀತಿಯಲ್ಲಿ ಅದನ್ನು ಮತ್ತೇ ಸಡಿಲಿಸಬೇಕು, ವ್ಯಾಪಾರಿಗಳಿಗಿರುವ ಸಮಸ್ಯೆಗಳೇನು ಎನ್ನುವುದನ್ನು ಕರೆದು ಚರ್ಚಿಸುವ ಕನಿಷ್ಟ ಕಾಳಜಿ ಇಲ್ಲದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ರಾಜ್ಯ ಮಟ್ಟದಲ್ಲಿ ಕೊರೊನಾ ಸಂದರ್ಭದಲ್ಲಿಯೂ ಬಿಜೆಪಿಯ ಅಧಿಕಾರದ ಕಿತ್ತಾಟಕ್ಕೆ ಜನ ಬಲಿಯಾಗುವಂತಾಗಿದೆ. ಇದೇ ಪರಿಸ್ಥಿತಿ ಜಿಲ್ಲೆಯಲ್ಲಿಯೂ ಇದೆ. ಜಿಲ್ಲಾ ಉಸ್ತುವಾರಿ ಸಚಿವರ ನಾಯಕತ್ವದ ಕೊರತೆ ಜಿಲ್ಲೆಯನ್ನು ತೊಂದರೆಗೆ ಗುರಿ ಮಾಡಿದ್ದರೇ, ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ನಿರ್ಲಕ್ಷ್ಯೆಗೆ ಸ್ಥಳೀಯ ವ್ಯಾಪಾರಿಗಳು ಸಮಸ್ಯೆ ಎದುರಿಸುವಂತಾಗಿದೆ.
ವ್ಯಾಪಾರಸ್ಥರು ಸರ್ಕಾರಕ್ಕೆ ತೆರಿಗೆ ತುಂಬುವ ಸಮುದಾಯವಾಗಿದೆ. ಇವರಿಗೆ ವ್ಯಾಪಾರ ನಿರ್ವಹಿಸಲು ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎನ್ನುವ ಬಗ್ಗೆ ಯೋಜನೆಗಳಿಲ್ಲ. ಈ ರೀತಿ ಕಾರ್ಯ ನಿರ್ವಹಿಸುವುದರಿಂದ ವ್ಯಾಪಾರಸ್ಥರು ತೀವ್ರ ತೊಂದರೆಗೆ ಗುರಿಯಾಗುವಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಗಮನ ಹರಿಸಬೇಕು. ಸ್ಥಳೀಯ ನಾಯಕರು ಈ ಬಗ್ಗೆ ಗಮನ ಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.