ವ್ಯಾಪಾರಸ್ಥರಿಗೆ ಸೂಕ್ತ ಜಾಗೆ ನೀಡಲು ಮನವಿ

ಹುಬ್ಬಳ್ಳಿ ಜ 1 ; ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಅಭಿವೃದ್ಧಿಗಾಗಿ ರಸ್ತೆ ಬದಿಯಲ್ಲಿರುವ ಗೂಡಂಗಡಿಗಳ ತೆರವಿಗೆ ಯಾವುದೇ ಸ್ಥಳ ನಿಗದಿ ಮಾಡದೇ ತೆರವಿಗೆ ಪಾಲಿಕೆ ಮುಂದಾಗಿರುವುದು ಖಂಡನೀಯ ಎಂದು ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಅವರ ನೇತೃತ್ವದಲ್ಲಿ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆ ಅನುದಾನದಡಿಯಲ್ಲಿ ಕಳೆದ 14 ವರ್ಷಗಳ ಹಿಂದೆ ನೀಡಲಾದ ಲಿಡಕರ್ ಚರ್ಮ ಕುಟೀರಗಳನ್ನು ತೆರವುಗೊಳಿಸಲು ಆದೇಶಿಸಿದ್ದರು ಆದರೆ ಪರ್ಯಾಯ ಸ್ಥಳ ನಿಗದಿ ಪಡಿಸದೇ ಇರುವುದರಿಂದ ಕೋವಿಡ್-19 ನಿಂದ ನಲುಗಿ ಹೋಗಿರುವ ವ್ಯಾಪಾರಸ್ಥರ ಬದುಕು ಕಷ್ಟದ ಸ್ಥಿತಿಯಲ್ಲಿದೆ. ಹೀಗಿರುವಾಗ ಸೂಕ್ತ ಜಾಗೆ ನೀಡುವ ಮೂಲಕ ಪಾಲಿಕೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಲಾಯಿತು.
ಅಲ್ಲದೇ ಅಕ್ರಮವಾಗಿ ತಲೆ ಎತ್ತುತ್ತಿರುವ ಪಾರ್ಕಿಂಗ್, ಕೆರೆ, ಕ್ರೀಡಾಂಗಣಗಳ ಪಾರ್ಕಗಳಲ್ಲಿನ ಜಾಗೆಗಳು, ಅಕ್ರಮ ಬಹು ಮಹಡಿ ಕಟ್ಟಡಗಳ ತೆರವು ಕಾರ್ಯಕ್ಕೆ ಮುಂದಾಗುವ ಮೂಲಕ ಉಳ್ಳವರ ಅಕ್ರಮಕ್ಕೆ ಕಡಿವಾಣ ಹಾಕಲು ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಸಮಗಾರ ಹರಳಯ್ಯ ಮಹಾಮಂಡಳ, ಸಮಗಾರ ಹರಳಯ್ಯ ಯುವ ಮಂಚ್, ಲಿಡಕರ್ ಚರ್ಮ ಕುಟೀರಕಾರ ಸಂಘದ ಮುಖಂಡರಿಂದ ಮನವಿ ಅರ್ಪಿಸಲಾಯಿತು.
ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ, ಯಮನೂರ ಗುಡಿಯಾಳ, ರೇವಣಸಿದ್ದಪ್ಪ ದೇಸಾಯಿ, ಪಾಲಿಕೆ ಜಂಟಿ ಆಯುಕ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.