ವ್ಯಾಪಾರಕ್ಕಾಗಿ ವಿಧಾನಸೌಧ ಬಳಕೆ ಬಿಜೆಪಿ ವಿರುದ್ಧ ವಾಗ್ದಾಳಿ

ಬೆಂಗಳೂರು, ಅ. ೩೦- ವಿಧಾನಸೌಧವನ್ನು ವ್ಯಾಪಾರ ಸೌಧವನ್ನಾಗಿ ಮಾಡಿದ್ದು ಬಿಜೆಪಿಯವರು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿಯವರು ತಾವು ಸತ್ಯವಂತರು ಎಂಬಂತೆ ಪ್ರವಚನ ಮಾಡುವುದನ್ನು ಮೊದಲು ನಿಲ್ಲಿಸಲಿ, ಅವರ ಕಾಲದಲ್ಲಿ ಏನೇನು ಅಕ್ರಮಗಳಾಗಿವೆ ಎಂಬುದು ಜನರಿಗೆ ಗೊತ್ತಿದೆ ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರೀಕ್ಷಾ ಅಕ್ರಮಗಳನ್ನು ಸಮರ್ಥವಾಗಿ ತಡೆದಿದ್ದೇವೆ. ಪಿಎಸ್‌ಐ ನೇಮಕಾತಿ ಅಕ್ರಮ ನಡೆದಾಗ ಬಿಜೆಪಿಯವರೇ ಅಧಿಕಾರದಲ್ಲಿದ್ದರು. ಆಗ ಏಕೆ ಅಕ್ರಮ ಪತ್ತೆಹಚ್ಚಲಿಲ್ಲ ಎಂದು ಅವರು ಆಕ್ರೋಶ ಹೊರ ಹಾಕಿದರು.ಪರೀಕ್ಷಾ ಅಕ್ರಮಗಳಲ್ಲಿ ಬಿಜೆಪಿಯ ನಾಯಕರುಗಳು ಬಲಗೈ ಬಂಟರೇ ಭಾಗಿಯಾಗಿದ್ದಾರೆ. ಹೀಗಿದ್ದರೂ ಬಿಜೆಪಿಯವರು ಪ್ರವಚನ ಮಾಡುತ್ತಿದ್ದಾರೆ. ಇವರಿಗೆ ನೈತಿಕತೆ ಇಲ್ಲ ಎಂದು ಅವರು ಟೀಕಿಸಿದರು.ಕಳೆದ ೨ ದಿನಗಳ ಹಿಂದೆ ನಡೆದ ಪರೀಕ್ಷಾ ಪ್ರಾಧಿಕಾರ ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಸಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದನ್ನು ಪತ್ತೆ ಹಚ್ಚಿದ್ದೇವೆ. ಪಿಎಸ್‌ಐ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಸೇರಿದಂತೆ ಅಕ್ರಮ ಎಸಗಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಅವರು ಹೇಳಿದರು.
ಎರಡು ವರ್ಷದ ಬಳಿಕ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಯಾವುದೇ ಪ್ರಸ್ತಾಪ ಇಲ್ಲ. ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಒಂದು ವೇಳೆ ಇಂತಹ ಪ್ರಸ್ತಾಪ ಇದ್ದರೆ ಆ ಬಗ್ಗೆ ೩-೪ ಮಂದಿಗೆ ಮಾತ್ರ ಗೊತ್ತಿರಬಹುದು. ಅವರನ್ನು ಬಿಟ್ಟು ಬೇರೆ ಯಾರೇ ಏನು ಹೇಳಿದರೂ ಅದು ಅವರ ಕಲ್ಪನೆ ಎಂದು ಪ್ರಿಯಾಂಕ ಖರ್ಗೆ ಹೇಳಿದರು.