ವ್ಯಾನ್ ಪಲ್ಟಿ ೭ ಮಂದಿ ಸಾವು

ವಿಜಯವಾಡ,ಅ.೩೦-ಮದುವೆ ಸಮಾರಂಭ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವ್ಯಾನ್ ಬ್ರೇಕ್ ವೈಫಲ್ಯಗೊಂಡಿದ್ದರಿಂದ ಬೆಟ್ಟದಿಂದ ಕೆಳಗಡೆ ಉರುಳಿ, ೭ ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ತಂತಿಕೊಂಡ ಬಳಿ ನಡೆದಿದೆ.
ತಂತಿಕೊಂಡಾ ಘಾಟ್ ರಸ್ತೆಯಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಇಂದು ನಸುಕಿನ ೩.೩೦ರ ವೇಳೆ ನಡೆದ ಈ
ದುರ್ಘಟನೆಯಲ್ಲಿ ೭ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಗಾಯಗೊಂಡ ೧೦ ಮಂದಿಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ತಂತಿಕೊಂಡ ಬಳಿ ನಿನ್ನೆ ರಾತ್ರಿ ಮದುವೆ ಮುಗಿಸಿಕೊಂಡು ನಸುಕಿನಲ್ಲಿ ಊರಿನ ಕಡೆಗೆ ಗಂಡಿನ ಕಡೆಯವರು ವ್ಯಾನ್‌ನಲ್ಲಿ ಹೊರಟ್ಟಿದ್ದರು.
ಮದುವೆ ಮಂಟಪದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವ್ಯಾನ್ ಬೆಟ್ಟದಿಂದ ಕೆಳಕ್ಕೆ ಉರುಳಿದೆ. ಏಳು ಮಂದಿ ಮೃತಪಟ್ಟಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಗೋಕವರಂ ಮಂಡಲದ ಠಾಕೂರ್‌ಪಾಲೆಂ ಗ್ರಾಮಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ರಜಮುಂಡ್ರಿ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಬಾಜಪೇಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹಗಳನ್ನು ಶವಪರೀಕ್ಷೆಗೆಂದು ರಾಜಮುಂಡ್ರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.