ವ್ಯಾಜ್ಯಗಳ ಸಂಧಾನದಲ್ಲಿ ಲೋಕ ಅದಾಲತ್ ಯಶಸ್ವಿ

ಕೋಲಾರ,ನ,೧೯- ರಾಜಿ-ಪಂಚಾಯಿತಿ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವಂತೆ ಮನವೊಲಿಸುವ ಕಾರ್ಯದಲ್ಲಿ ಇಡೀ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು ಹಾಗೂ ವಕೀಲರು ಯಶಸ್ವಿಯಾಗಿದ್ದಾರೆ ಎಂದು ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಆರ್.ನಾಗರಾಜ್ ಹೇಳಿದರು.
ಕೋಲಾರದ ಜಿಲ್ಲಾ ನ್ಯಾಯಾಲಂiiಗಳ ಸಂಕೀರ್ಣ ಕಟ್ಟಡದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಪ್ರೀತಿ, ಪ್ರೇಮ, ಭ್ರಾತೃತ್ವ, ಸಂಬಂಧಗಳು ಯಾವುದೇ ದಾವೆ, ಅರ್ಜಿ, ಅಪೀಲು ಮಾಡಿಕೊಳ್ಳುವ ಯಾವುದೇ ವ್ಯಾಜ್ಯಪ್ರಕರಣಕ್ಕೂ ಎರಡೂ ಕಡೆಯ ಪಾರ್ಟಿಗಳು ಸ್ನೇಹ, ಸೌಹಾರ್ಧತೆಯಿಂದ ಬಗೆಹರಿಸಿಕೊಳ್ಳುವುದಕ್ಕೆ ರಾಜಿ-ಸಂಧಾನವು ಅತ್ಯಂತ ಯಶಸ್ವಿ ಹಾಗೂ ಪ್ರಬಲ ಮಾರ್ಗವಾಗಿದೆ ಎಂದು ಹೇಳಿದರು.
ರಾಜಿ-ಸಂಧಾನದ ಮೂಲಕ ವ್ಯಾಜ್ಯಪ್ರಕರಣಗಳನ್ನು ಬಗೆಹರಿಸಿಕೊಳ್ಳು ವಾಗ ಎರಡೂ ಕಡೆಯ ಪಾರ್ಟಿಗಳು ಒಂದೆಡೆ ಕಲೆಯುತ್ತಾರೆ. ಆಗ ಎರಡೂ ಪಾರ್ಟಿಗಳಲ್ಲಿ ಉದ್ಭವಿಸಿರುವ ಬಿಗುಮಾನ, ಕಲಹ, ಧ್ವೇಷಗಳು ಖಂಡಿತಾ ನಿವಾರಣೆಯಾಗುತ್ತವೆ. ಇದರಿಂದ ಭ್ರಾತೃತ್ವ, ಭಾವೈಕ್ಯತೆ ಸಾಧ್ಯವಾಗುವುದು. ಶಾಂತಿ ನೆಲೆಸುವುದು ಎಂದರು.
ಕೇಸುಗಳನ್ನು ದಾಖಲಿಸಿ ನಡೆಸುತ್ತಿರುವವರೆಗೆ ಈಗಾಗಲೇ ಪರಿಸ್ಥಿತಿ ಅರ್ಥವಾಗಿರುತ್ತದೆ. ಕೇಸಿಗೆ ಹಾಜರಾಗುವುದಕ್ಕೆ ಒಂದು ಇಡೀ ದಿನ ಕೆಲಸ ನಿಲ್ಲುತ್ತದೆ. ಆ ದಿನದ ಖರ್ಚು ಮೈಮೇಲೆ ಬೀಳುತ್ತದೆ. ಆ ದಿನದ ಕೂಲಿ ತಪ್ಪುತ್ತದೆ. ಬೆಳಿಗ್ಗೆ ತಿಂದು ಬಂದ ತಿಂಡಿಯೇ ಸಂಜೆ ಮನೆಗೆ ಹೋಗಿ ತಿನ್ನುವವರೆಗೂ ಆಧಾರವಾಗಬೇಕಿರುತ್ತದೆ. ತಮ್ಮೊಂದಿಗೆ ಬೇರೆ ಯಾರನ್ನಾದರೂ ಕರೆದುಕೊಂಡು ಬಂದಿದ್ದಲ್ಲಿ ಅವರ ಖರ್ಚನ್ನೂ ನಿಭಾಯಿಸಬೇಕಿರುತ್ತದೆ. ಇದರೊಟ್ಟಿಗೆ ವಕೀಲರ ಖರ್ಚು, ನಿಮ್ಮ ವೈಯುಕ್ತಿಕ ಖರ್ಚು ಹೀಗೆ ಹೈರಾಣವಾಗುತ್ತೀರಿ. ರಾಜಿ-ಸಂಧಾನದ ಮೂಲಕ ಈ ಎಲ್ಲಾ ಬವಣೆಗಳಿಗೂ ಮುಕ್ತಿ ಸಿಗುತ್ತದೆ ಎಂದರು.
ರಾಜಿಯಾಗಬಲ್ಲ ಪ್ರತಿ ಕೇಸನ್ನೂ ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪಾರ್ಟಿಗಳು ಇಚ್ಛಿಸಿದಲ್ಲಿ ನಾವು ಖಂಡಿತಾ ಅದಕ್ಕೆ ಪೂರಕ ವಾತಾವರಣವನ್ನು ಇಲ್ಲಿಯೇ ಕಲ್ಪಿಸಿಕೊಡುತ್ತೇವೆ. ರಾಜಿಯಾಗುವಂತೆ ಒತ್ತಾಯಿಸುವಂತಿಲ್ಲ. ಆದರೆ ರಾಜಿಯಾಗುವುದಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಲಾಗುವುದು. ಎರಡೂ ಪಾರ್ಟಿಗಳು ಕುಳಿತು, ಚರ್ಚಿಸಿ, ರಾಜಿಯಾಗುವುದಕ್ಕೆ ಮುಂದಾಗಬೇಕು ಎಂದರು
ಇದಕ್ಕೆ ಪೂರಕವಾದ ಮನಃಸ್ಥಿತಿಯನ್ನು ಮೂಡಿಸುವ ನಿಟ್ಟಿನಲ್ಲಿ ನಮ್ಮ ಎಲ್ಲಾ ವಕೀಲರು ಮುಂದಾಗಬೇಕು. ಎರಡೂ ಪಾರ್ಟಿಗಳಿಗೆ ಕಾನೂನಿನ ಚೌಕಟ್ಟಿನ ಅರ್ಥ, ನ್ಯಾಯಾಲಯದ ವ್ಯಾಪ್ತಿ, ವ್ಯಾಜ್ಯಸ್ವರೂಪ, ವ್ಯಾಜ್ಯನಿವಾರಣೆಗೆ ಯುಕ್ತ ಅಂಶಗಳು, ರಾಜಿಯಿಂದಾಗುವ ಪ್ರಯೋಜನಗಳ ಬಗ್ಗೆ ಕಕ್ಷಿದಾರರಿಗೆ ಮನವರಿಕೆ ಮಾಡಿಕೊಟ್ಟು ಅವರ ಮನೆ ಗೆಲ್ಲಬೇಕಿದೆ ಎಂದು ಹೇಳಿದರು.