ಮಾಸ್ಕೊ, ಜೂ.೩೪- ಉಕ್ರೇನ್ ವಿರುದ್ಧ ದಾಳಿ ಆರಂಭಿಸಿದಂದಿನಿಂದ ರಷ್ಯಾ ಪರ ತೀವ್ರ ರೀತಿಯಲ್ಲಿ ಹೋರಾಟ ನಡೆಸಿದ್ದ ಬಾಡಿಗೆ ಸೇನಾಪಡೆ ವ್ಯಾಗ್ನರ್ ಗ್ರೂಪ್ ಇದೀಗ ಸ್ವತಹ ರಷ್ಯಾ ವಿರುದ್ಧವೇ ತಿರುಗಿ ಬಿದ್ದಿರುವುದು ಅಚ್ಚರಿ ಮೂಡಿಸಿದೆ. ನನ್ನ ಸೇನಾಪಡೆಗಳನ್ನು ರಷ್ಯಾ ಹತ್ಯೆ ನಡೆಸಿದೆ ಎಂದು ವ್ಯಾಗ್ನರ್ ಗ್ರೂಪ್‌ನ ಮುಖ್ಯಸ್ಥ ಯೆವ್ನೆನಿ ಪ್ರಿಗೊಝಿನ್ ಗಂಭೀರ ಆರೋಪ ನಡೆಸಿದ್ದು, ಇದರ ವಿರುದ್ಧ ಪ್ರತಿಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ರಷ್ಯಾಗೆ ಬೆಂಬಲ ನೀಡಿ, ಉಕ್ರೇನ್ ವಿರುದ್ಧ ಹೋರಾಟ ಖಾಸಗಿ ಮಿಲಿಟರಿ ಗುಂಪು ವ್ಯಾಗ್ನರ್ ಹೋರಾಟ ನಡೆಸಿತ್ತು. ಆದರೆ ಇತ್ತೀಚಿಗಿನ ಕೆಲ ವಾರಗಳಲ್ಲಿ ವ್ಯಾಗ್ನರ್ ಹಾಗೂ ರಷ್ಯಾ ನಡುವಿನ ಸಂಬಂಧ ಹಳಸುತ್ತಾ ಬಂದಿರುವುದು ವಿಪರ್ಯಾಸ. ರಷ್ಯಾದ ಮಿಲಿಟರಿ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನೀತಿಗಳ ವಿರುದ್ಧ ವ್ಯಾಗ್ನರ್ ಪಡೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿತ್ತು. ಇದೀಗ ಈ ಅಸಮಾಧಾನ ತೀವ್ರವಾಗಿದ್ದು, ಕದನದ ಕಡೆಗೆ ಹೋಗಿರುವುದು ಅಚ್ಚರಿದಾಯಕ ಸಂಗತಿ. ಸ್ವತಹ ಪರಮಾಪ್ತ ರಾಷ್ಟ್ರ ರಷ್ಯಾ ವಿರುದ್ಧವೇ ವ್ಯಾಗ್ನರ್ ಗುಂಪು ಬಂಡೆದ್ದಿರುವುದು ಅತ್ತ ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಸಹಜವಾಗಿಯೇ ಮುನ್ನಡೆ ನೀಡಿದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ನೆನಿ ಪ್ರಿಗೊಝಿನ್, ತಮ್ಮ ಗುಂಪಿನ ಮೇಳೆ ದಾಳಿ ನಡೆಸುತ್ತಿರುವ ರಷ್ಯಾ ಸೇನೆಯ ನಾಯಕತ್ವ ಕೊನೆಗೊಳಿಸಲು ಯಾವುದೇ ಕ್ರಮಕ್ಕೆ ಸಿದ್ಧ. ನಾವು ಮುನ್ನಡೆಯುತ್ತಿದ್ದೇವೆ ಹಾಗೂ ಕೊನೆಯನ್ನೂ ತಲುಪಲಿದ್ದೇವೆ, ನಾವು ೨೫ ಸಾವಿರ ಮಂದಿ ದೇಶಕ್ಕಾಗಿ ಪ್ರಾಣ ನೀಡಲು ಸಿದ್ದ. ಆಮೇಲೆ ಇನ್ನೂ ೨೫ ಸಾವಿರ ಮಂದಿ ಅದಕ್ಕಾಗಿ ಸಿದ್ಧವಾಗುತ್ತಾರೆ. ನಮ್ಮ ದಾರಿಗೆ ಏನೇ ಅಡ್ಡಬಂದರೂ ಅದನ್ನು ನಾಶಪಡಿಸುತ್ತೇವೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಸವಾಲು ಹಾಕಿದ್ದಾರೆ. ಅಲ್ಲದೆ ರಷ್ಯಾಗೆ ಸೇರಿದ ಹೆಲಿಕಾಪ್ಟರ್ ಒಂದನ್ನು ಕೂಡ ವ್ಯಾಗ್ನರ್ ನಾಶಪಡಿಸಿದೆ ಎನ್ನಲಾಗಿದೆ. ಇನ್ನು ವ್ಯಾಗ್ನರ್ ಮೇಲೆ ದಾಳಿ ನಡೆಸಿದ ವಿಚಾರವನ್ನು ರಷ್ಯಾ ಅಲ್ಲಗಳೆದಿದೆ.
ಏನಿದು ವ್ಯಾಗ್ನರ್ ಪಡೆ?
ವ್ಯಾಗ್ನರ್ ಗ್ರೂಪ್ ಎಂಬುದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾಜಿ ಅತ್ಯಾಪ್ತ, ಸದ್ಯ ಬಂಡೆದ್ದಿರುವ ಯೆವ್ನೆನಿ ಪ್ರಿಗೊಝಿನ್ (೬೨) ಎಂಬಾತನ ಖಾಸಗಿ ಸೇನೆ. ರಷ್ಯಾದಲ್ಲಿ ಖಾಸಗಿ ಸೇನೆಗೆ ಅನುಮತಿ ಇಲ್ಲ. ಆದರೆ ರಷ್ಯಾ ಅಧ್ಯಕ್ಷರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವ ಖಾಸಗಿ ಅಥವಾ ಅರೆ ಮಿಲಿಟರಿ ತಂಡವಾಗಿರುವ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿದೆ. ಈ ವಾಗ್ನರ್ ಗ್ರೂಪ್ ಗೆ ರಷ್ಯಾದ ಮಿಲಿಟರಿ ಇಲಾಖೆಯೇ ಶಸ್ತ್ರಾಸ್ತ್ರ ಪೂರೈಸುತ್ತದೆ. ಅಲ್ಲದೆ ತನ್ನ ನೆಲೆಯಲ್ಲೇ ಗ್ರೂಪಿಗೆ ತರಬೇತಿಯನ್ನೂ ಕೊಡುತ್ತದೆ. ಅಲ್ಲದೆ ಉಕ್ರೇನ್ ವಿರುದ್ಧ ಹೋರಾಟದಲ್ಲಿ ರಷ್ಯಾ ಪರ ವ್ಯಾಗ್ನರ್ ಗುಂಪಿನ ದಾಳಿ ಹೆಚ್ಚಿದೆ. ಸದ್ಯ ಈ ಗುಂಪು ರಷ್ಯಾ ಅಧ್ಯಕ್ಷ ಹಾಗು ಮಿಲಿಟರಿ ವಿರುದ್ಧ ಬಂಡೆದ್ದಿದೆ.