ವ್ಯಾಕ್ಸಿನ್ ಪಡೆಯಲು ಜನ ಹಿಂದೇಟು:ಗುರಿ ಸಾಧಿಸಲು ಅಧಿಕಾರಿಗಳ ಪರದಾಟ

 • ೬೦ಸಾವಿರ ಗುರಿ, ೧೩ಸಾವಿರ ಸಾಧನೆ
  ಬಾಬು ಅಲಿ ಕರಿಗುಡ್ಡ.
  ದೇವದುರ್ಗ.ಏ.೧೮- ಮಹಾಮಾರಿ ಕೊರೊನಾ ವೈರಸ್ ತಡೆಗೆ ಸರ್ಕಾರ ಲಸಿಕಾ ಅಭಿಯಾನ ಆರಂಭಿಸಿದ್ದು, ತಾಲೂಕಿನಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಆರೋಗ್ಯ ಇಲಾಖೆಗೆ ಒತ್ತಡ ಹೆಚ್ಚಾಗಿದ್ದು, ಮನೆಮನೆಗೆ ತೆರಳಿದರೂ ಜನರು ಮಾತ್ರ ಆರೋಗ್ಯ ಕೇಂದ್ರದ ಕಡೆ ಮುಖ ಮಾಡುತ್ತಿಲ್ಲ.
  ಗ್ರಾಮೀಣ ಭಾಗ ಸೇರಿ ೪೫ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಕೊಡುವ ಗುರಿ ಹೊಂದಲಾಗಿದೆ. ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ೪೫ವರ್ಷ ಮೇಲ್ಪಟ್ಟ ಒಟ್ಟು ಜನಸಂಖ್ಯೆಯಲ್ಲಿ ಶೇ.೨೦ರಷ್ಟು ಜನರಿಗೆ ವ್ಯಾಕ್ಸಿನ್ ಹಾಕುವ ಉದ್ದೇಶ ಹೊಂದಲಾಗಿದೆ.
  ಲಸಿಕಾ ಅಭಿಯಾನ ಆರಂಭವಾಗಿ ೩ತಿಂಗಳು ಕಳೆಯುತ್ತಾ ಬಂದರೂ ಅರ್ಧದಷ್ಟು ಸಾಧನೆ ಆಗಿಲ್ಲ. ವ್ಯಾಕ್ಸಿನ್ ಎಂದರೆ ಜನರು ಮೂಗು ಮುರಿಯುತ್ತಿದ್ದು, ಜಾಗೃತಿ ಕೊರತೆ, ಆತಂಕ, ನಿರಾಸಕ್ತಿ ಮನೋಭಾವ ಜನರು ದೂರು ಉಳಿಯಲು ಕಾರಣ ಎನ್ನಲಾಗಿದೆ.
  ೨೦೨೧ ಜ.೧ರಿಂದ ೬೦ವರ್ಷ ಮೇಲ್ಪಟ್ಟ ಬಿಪಿ, ಸುಗರ್ ಸೇರಿ ಎಲ್ಲ ಯಾವುದೇ ರೋಗ ಹೊಂದಿದ್ದರೂ ಅವರಿಗೂ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿತ್ತು. ಫೆ.೧ರಿಂದ ೪೫ವರ್ಷ ಮೇಲ್ಪಟ್ಟ ಎಲ್ಲ ಜನರಿಗೂ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದೆ. ತಾಲೂಕಿನ ನಾಲ್ಕು ಹೋಬಳಿಯ ೬೦ಸಾವಿರ ಜನರಿಗೆ ವ್ಯಾಕ್ಸಿನ್ ನೀಡಲು ಉದ್ದೇಶಿಸಿದ್ದು, ಈವರೆಗೆ ೧೩ಸಾವಿರ ಜನರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ.
  ಎಲ್ಲೆಲ್ಲಿ ಎಷ್ಟು ವ್ಯಾಕ್ಸಿನ್?
  ೪೫ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೭೫೫ಜನರಿಗೆ, ಜಾಲಹಳ್ಳಿ ೭೫೨, ಗಾಣಧಾಳ ೯೬೭, ಚಿಂಚೋಡಿ ೫೩೧, ಗಲಗ ೮೨೪, ಅರಕೇರಾ ೧೦೭೧, ರಾಮದುರ್ಗ ೬೩೩, ಗಬ್ಬೂರು ೧೩೫೫, ಹಿರೇಬೂದೂರು ೮೯೨, ಮಸರಕಲ್ ೧೦೫೪, ಕೊಪ್ಪರ ೭೦೧ ಹಾಗೂ ಉಪಕೇಂದ್ರಗಳಲ್ಲಿ ೨೭೬೮ ಸೇರಿ ಒಟ್ಟು ೧೩ಸಾವಿರ ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಗ್ರಾಮೀಣ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದ್ದು, ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಮುಂದೆ ಬರುತ್ತಿಲ್ಲ. ಇದು ಆರೋಗ್ಯ ಇಲಾಖೆ ಆತಂಕಕ್ಕೆ ಕಾರಣವಾಗಿದೆ.

ಕೋಟ್=
ಕೊರೊನಾ ತಡೆಗೆ ೪೫ವರ್ಷ ಮೇಲ್ಪಟ್ಟ ಸರ್ವರಿಗೂ ವ್ಯಾಕ್ಸಿನ್ ಕೊಡಲು ಆರೋಗ್ಯ ಇಲಾಖೆ ಸಿದ್ಧವಿದ್ದು, ಜನರು ಮಾತ್ರ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿ ಲಸಿಕೆ ಪಡೆಯಲು ಮನವೊಲಿಸುತ್ತಿದ್ದಾರೆ. ೬೦ಸಾವಿರ ಗುರಿಯಿದ್ದು, ಕೇವಲ ೧೩ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ.
ಡಾ.ಆರ್.ಎಸ್.ಹುಲಿಮನಿ
ತಾಲೂಕು ವೈದ್ಯಾಧಿಕಾರಿ.