ವ್ಯಾಕ್ಸಿನೇಷನ್ ಅಪಪ್ರಚಾರಕ್ಕೆ ಆಧಾರವಿಲ್ಲ

ಬೆಂಗಳೂರು, ಮೇ ೩೦- ಕೊರೊನಾ ಸಂಪೂರ್ಣ ವ್ಯಾಕ್ಸಿನೇಷನ್ ಪ್ರಕ್ರಿಯೆ ಮತ್ತು ಚಾಲನೆಯ ಬಗ್ಗೆ ರಾಜಕೀಯ ಪ್ರೇರಿತ ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಈ ಅಪಪ್ರಚಾರ ಆಧಾರವಿಲ್ಲದ್ದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ಸಂಪೂರ್ಣ ವ್ಯಾಕ್ಸಿನೇಷನ್ ಬಗ್ಗೆ ಆಧಾರವಿಲ್ಲದ ವದಂತಿಗಳನ್ನು ಹರಡಲಾಗುತ್ತಿದೆ. ವಿದೇಶದಿಂದ ಲಸಿಕೆಯನ್ನು ಖರೀದಿ ಮಾಡಲು ಕೇಂದ್ರ ಸರ್ಕಾರವು ಶ್ರಮ ವಹಿಸುತ್ತಿಲ್ಲ ಎಂಬುದು ಮಿಥ್ಯ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಇದುವರೆಗೂ ೨೦ ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರವು ೨೦೨೦ರ ಮಧ್ಯ ಭಾಗದಿಂದಲೇ ಎಲ್ಲ ಪ್ರಮುಖ ಅಂತರಾಷ್ಟ್ರೀಯ ಲಸಿಕಾ ಸಂಸ್ಥೆಗಳ ಜತೆ ನಿರಂತರ ಸಂಪರ್ಕದಲ್ಲಿದೆ. ಫೈಜರ್, ಜಾನ್ಸನ್ ಅಂಡ್ ಜಾನ್ಸನ್ ಮತ್ತು ಮಾರ್ಡೆನಾ ಜತೆ ಅನೇಕ ಸುತ್ತಿನ ಮಾತುಕತೆಗಳನ್ನೂ ನಡೆಸಿದೆ. ಭಾರತದಲ್ಲಿ ಈ ಕಂಪನಿಗಳ ಲಸಿಕೆಯನ್ನು ಸರಬರಾಜು ಮಾಡುವ ಅಥವಾ ತಯಾರಿಕೆಯನ್ನು ಮಾಡಲು ಸರ್ಕಾರ ಅವರಿಗೆ ಎಲ್ಲ ರೀತಿಯ ನೆರವನ್ನೂ ನೀಡುತ್ತಾ ಬಂದಿದೆ. ಆದರೆ, ಅವರ ಲಸಿಕೆಗಳು ಉಚಿತವಾಗಿ ಸರಬರಾಜು ಮಾಡಲು ಲಭ್ಯವಿರಲಿಲ್ಲ. ಲಸಿಕೆಯನ್ನು ಅಂತರಾಷ್ಟ್ರೀಯವಾಗಿ ಖರೀದಿ ಮಾಡುವುದು ಎಂದರೆ ಸಿದ್ಧ ವಸ್ತುಗಳನ್ನು ಖರೀದಿ ಮಾಡಿದ ರೀತಿ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಜಾಗತಿಕವಾಗಿ ಲಸಿಕೆಯ ಸರಬರಾಜು ಸೀಮಿತ ಪ್ರಮಾಣದಲ್ಲಿದೆ. ಲಸಿಕೆ ತಯಾರು ಮಾಡಿರುವ ಸಂಸ್ಥೆಗಳು ತಮ್ಮ ರಾಷ್ಟ್ರಕ್ಕೆ ಆಧ್ಯತೆ ನೀಡುತ್ತಿವೆ. ಫೈಜರ್ ಕಂಪನಿಯ ಲಸಿಕೆ ಆಮದು ಕಾರ್ಯ ಆರಂಭವಾಗಿದೆ. ರಷ್ಯಾದಿಂದ ಸ್ಪುಟ್ನಿಕ್ ಲಸಿಕೆಯನ್ನು ತರಿಸಿಕೊಳ್ಳಲಾಗಿದೆ. ಹಾಗೆಯೇ ಕಂಪನಿಗಳಿಗೆ ಬೇಕಾದ ತಂತ್ರಜ್ಞಾನವನ್ನೂ ಕೂಡ ರಷ್ಯಾ ಒದಗಿಸಿದೆ. ಇದರಿಂದ ಭಾರತದಲ್ಲೇ ಸ್ಪುಟ್ನಿಕ್ ಲಸಿಕೆ ತಯಾರಿಕೆ ಕಾರ್ಯಗಳು ಆರಂಭವಾಗಲಿದೆ. ಇವುಗಳು ಲಸಿಕೆಗೆ ಸಂಬಂಧಿಸಿದ ಸತ್ಯ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.