ವ್ಯಾಕ್ಸಿನೇಷನ್‌ ಹಾಕಿಸಲು ಬಾಂಡ್ ಬರೆದು ಕೊಡಿ; ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಒತ್ತಾಯ


ಚಿತ್ರದುರ್ಗ,ಅ.28: ಗ್ರಾಮೀಣ ಭಾಗದ ಜನರಿಗೆ ಕೊವಿಡ್ 19 ವ್ಯಾಕ್ಸಿನೇಷನ್‌ ಹಾಕಿಸಲು ಇಲ್ಲಿನ ಜಿಲ್ಲಾಧಿಕಾರಿ ಪರಿಪರಿ ಬೇಡಿದರೂ ಸ್ಪಂದಿಸದ ಮಹಿಳೆಯರು ಕೊನೆಗೆ ಜಿಲ್ಲಾಧಿಕಾರಿಗಳಿಗೆ  ಬುದ್ದಿವಾದ ಹೇಳಿದ ಘಟನೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.ಜಗತ್ತಿನೆಲ್ಲೇಡೆ ಮಹಾಮಾರಿ ಕೊವಿಡ್ ಸೊಂಕಿನಿಂದಾಗಿ ಜನರು ನಲುಗಿ ಹೋಗಿದ್ದಾರೆ. ಈ ಯಾಕೆ ಹತ್ತಿಕ್ಕಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡುತ್ತಿವೆ. ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಕಡೆ ಸಂಚರಿಸಿ ಜನರಲ್ಲಿ ಸೊಂಕಿನ ಕುರಿತು ಅರಿವು ಮೂಡಿಸಿ, ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.ಆದರೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಮಾತ್ರ ಮಹಿಳೆಯರು ಇದ್ಯಾವುದಕ್ಕೂ ಜಗ್ಗದೆ, ಯಾವುದೇ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಿಲ್ಲ ಎಂದು ವ್ಯಾಕ್ಸಿನ್ ಹಾಕಲು ಹೋದ ವೈದ್ಯರ ತಂಡದ ಜೊತೆ ವಾಗ್ವಾದ ನಡೆಸಿದ್ದಾರೆ.ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಹಿರೇಹಳ್ಳಿ  ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರೆ ಅವರು, ಪ್ರತಿ ಮನೆಗಳಿಗೆ ಭೇಟಿ ನೀಡಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಗ್ರಾಮದ ಮಹಿಳೆಯರು ಯಾವುದೇ ಸೊಂಕು ನಮಗೆ ಹರಡಿಲ್ಲ. ಅಲ್ಲದೆ ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳುವುದರಿಂದ ನಮಗೆ ಜ್ವರ ಸೇರಿದಂತೆ ಇತರೆ ಖಾಯಲೆಗಳು ಬರುತ್ತವೆ. ಆದ್ದರಿಂದ ಯಾವುದೇ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಜೊತೆಯೇ ವಾಗ್ವಾದಕ್ಕೆ ಇಳಿದಿದ್ದರು. ಕೊನೆಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರೆ ಅವರು ವ್ಯಾಕ್ಸಿನ್ ಪಡೆಯುವ ವರೆಗೆ ನಾನು ಯಾವುದೇ ಕಾರಣಕ್ಕೂ ಗ್ರಾಮ ಬಿಟ್ಟು ವಾಪಾಸ್ಸು ಹೋಗುವುದಿಲ್ಲ ಎಂದು ಹಟ ಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.ನಂತರ ವ್ಯಾಕ್ಸಿನ್ ಹಾಕಿಸಲು ಮನೆ ಮನೆಗೆ ತೆರಳಿದ ಜಿಲ್ಲಾಧಿಕಾರಿಗಳನ್ನು ನೋಡಿದ ಜನರು ಮನೆಗಳಿಂದ ಕಾಲ್ಕಿಳುತ್ತಿದ್ದಂತಹ ದೃಶ್ಯಗಳು ಕಂಡುಬಂದವು.ಗ್ರಾಮಸ್ಥರ ಪ್ರತಿ ಮನೆಗಳ ಬಳಿ ಕುಳಿತು ಬುದ್ದಿವಾದ ಹೇಳಿದ ಬಳಿಕಾ ಗ್ರಾಮದಲ್ಲಿ 171 ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು, ಹಿರೇಹಳ್ಳಿ ಗ್ರಾಮ ಪಂಚಾಯಿತಿ  ವ್ಯಾಪ್ತಿಯ 2150 ಗ್ರಾಮಸ್ಥರಿಗೆ ವ್ಯಾಕ್ಸಿನ್ ಹಾಕುವುದು ಬಾಕಿ ಇದೆ.ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳುವುದಕ್ಕೆ ಮುಂದೆ ಬರುತ್ತಿಲ್ಲ. ಅದೇ ರೀತಿ ಹಿರೇಹಳ್ಳಿಯ ಗ್ರಾಮದಲ್ಲೂ ಕೂಡ ಜನರು ಹಿಂಜರಿಯುತ್ತಿದರು. ಅಲ್ಲದೆ ಏನಾದರೂ ಖಾಯಲೆ ಬಂದರೆ ಯಾರು ಹೊಣೆ ಇದಕ್ಕೆ ಬಾಂಡ್ ಬರೆದುಕೊಡಿ ಎಂದು ನಮ್ಮನ್ನೆ ಕೇಳುತ್ತಾರೆ. ಇವರಿಗೆ ಯಾವ ರೀತಿ ಅರಿವು ಮೂಡಿಸಬೇಕು. ಜನರ ಆರೋಗ್ಯ ಕಾಪಾಡ ಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದ್ದು, ನಾಲ್ಕು ದಿನಗಳ ಕಾಲ ಗ್ರಾಮದಲ್ಲೇ ಬೀಡು ಬಿಟ್ಟು ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಹಾಕುವಂತೆ ವೈದ್ಯರ ತಂಡಕ್ಕೆ ಸೂಚನೆ ನೀಡಿರುವುದಾಗಿ ಸಂಜೆವಾಣಿಗೆ ತಿಳಿಸಿದ್ದಾರೆ.-