ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ : ಡಿಸಿಎಂ ಕಾರಜೋಳ


ಬಾಗಲಕೋಟೆ: ಡಿ.20 : ಮಾನವ ಕಲ್ಯಾಣಕ್ಕಾಗಿ ವ್ಯಸನಮುಕ್ತ ಸಮಾಜ ನಿರ್ಮಾಣ ಅಗತ್ಯವಾಗಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳಿ ಹೇಳಿದರು.
ನಗರದ ಬಿವಿವ ಸಂಘದ ನೂತನ ಸಭಾಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಹಮ್ಮಿಕೊಂಡ ರಾಜ್ಯ ಸಂಯಮ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೋಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಿಂದ ಹೊರಬರುವಂತೆ ಮಾಡುವಲ್ಲಿ ಮಠಾಧೀಶರು ಕೈಗೊಂಡ ಕಾರ್ಯ ದೊಡ್ಡದು ಎಂದರು.
ಸಮಾಜದಲ್ಲಿ ಲಿಂಗಬೇದ, ಮೇಲು-ಕೀಳು ಎಂಬುದನ್ನು ತೊಡೆದು ಹಾಕಲು 12ನೇ ಶತಮಾನದಿಂದಲೂ ಬಸವಾದಿ ಶರಣರು ಮಾಡುತ್ತಾ ಬಂದಿದ್ದಾರೆ. ಕಾರ್ಯಕ ಜೀವಿಗಳು, ಕೆಳವರ್ಗದವರನ್ನು ಪರಿವರ್ತನೆ ಮಾಡಲು ಬಸವಣ್ಣನವರು ಹೊಸ ಧರ್ಮವನ್ನೇ ಹುಟ್ಟು ಹಾಕಿದರು. ಈ ಪ್ರಯತ್ನ ನಿರಂತರವಾಗಿ ನಡೆಯುತ್ತ ಬಂದಿದೆ. ಅವರ ಮಾರ್ಗದಲ್ಲಿ ವಿಜಯ ಮಹಾಂತ ಶ್ರೀಗಳು ನಡೆಯುತ್ತಿದ್ದು, ಮಹಾಂತ ಜೋಳಿಗೆಯಿಂದ ದುಶ್ಚಟಗಳನ್ನು ತಮ್ಮ ಜೋಳಿಗೆ ಹಾಕಿಸಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ ಎಂದರು.
ವ್ಯಸನ ಮುಕ್ತ ಸಮಾಜ ನಿರ್ಮಾಣದ ಕಾರ್ಯವನ್ನು ಅವರ ಉತ್ತರಾಧಿಕಾರಿಗಳಾದ ಗುರುಮಹಾಂತ ಶ್ರೀಗಳು ಮುಂದುವರಿಸಿಕೊಂಡು ಬಂದಿದ್ದು, ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ವ್ಯಸನದಿಂದ ಮುಕ್ತರನ್ನಾಗಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಈ ಕಾರ್ಯವನ್ನು ಕಂಡು ಸರಕಾರ ರಾಜ್ಯ ಸಂಯಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಠಿಯಾಗಬೇಕು. ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಇನ್ನೊಬ್ಬರನ್ನು ಗೌರವಿಸುವ ಕಾರ್ಯವಾಗಬೇಕು. ಕೇವಲ ಮಠಾಧೀಶರಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುವದಿಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯವೆಂದರು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ವ್ಯಸನ ಮುಕ್ತ ಸಮಾಜ ನಿರ್ಮಿಸುವಲ್ಲಿ ಮಠಾಧೀಶರ ಕಾರ್ಯ ದೊಡ್ಡದಾಗಿದೆ ಎಂದರು. ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಹನಮಂತ ಕೊಟಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರೂರಿನ ಬಸವಲಿಂಗ ಶ್ರೀ, ಲಿಂಗಸೂರಿನ ಸಿದ್ದಲಿಂಗ ಶ್ರೀ, ಗುಳೇದಗುಡ್ಡದ ಗುರುಬಸವ ದೇವರ, ಜಮಖಂಡಿ ಹುನ್ನೂರಿನ ಈಶ್ವರ ಮಂಟೂರ ಸಾನಿಧ್ಯ ವಹಿಸಿದ್ದರು. ಪ್ರಾರಂಭದಲ್ಲಿ ಸಂಯಮ ಮಂಡಳಿಯ ಕಾರ್ಯದರ್ಶಿ ಎಸ್.ಶಂಕರಪ್ಪ ಸ್ವಾಗತಿಸಿದರು.