ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿ : ಹೆಚ್ಚುವರಿ ಎಸ್ಪಿ ಶ್ರೀನಿಧಿ

ಆಳಂದ : ಡಿ.21: ಪೊಲೀಸ್‍ರು ಎಂದರೆ ಭಯ ಮೊದಲು ಇತ್ತು ಆದರೆ ಈಗ ಜನಸ್ನೇಹಿಯಾಗಿ ಇಲಾಖೆಯವರು ಕಾರ್ಯ ಮಾಡುತ್ತಿದ್ದು ಜನರ ಸಹಕಾರ ಸದಾ ಇರಬೇಕು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ಶ್ರೀನಿಧಿ ಕರೆ ನೀಡಿದರು.
ತಾಲೂಕಿನ ಸರಸಂಬಾ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಹಾಗೂ ಮಾದಕ ವಸ್ತುಗಳ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿ ಭಾಗದ ತಾಲೂಕು ಇದಾಗಿರುವದರಿಂದ ಇಲ್ಲಿ ಅಹಿತಕರ ಚಟುವಟಿಕೆಗಳಿಗೆ ಮಟ್ಟ ಹಾಕಬೇಕಾದರೆ ಕೆಲವೊಮ್ಮೆ ಜನರು ಮಾಹಿತಿ ನೀಡಿದರೆ ಅದನ್ನು ಗೌಪ್ಯವಾಗಿಟ್ಟು ಆರೋಪಿಗಳ ಪತ್ತೆ ಹಚ್ಚಿ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ ಎಂದ ಅವರು, ಯುವಕರು ಕೆಚ್ಚ ಚಟಗಳ ದಾಸರಾಗದೆ ಉತ್ತಮವಾಗಿ ಸಮಾಜದಲ್ಲಿ ಬದುಕು ನಡೆಸುವಂತವರಾಗಬೇಕು ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ಇರಲಿ, ಸಮಾಜ ಘಾತಕ ಚಟುವಟಿಕೆಗಳಿಗೆ ತಡೆಯಲು ಇಲಾಖೆ ಸದಾ ಶ್ರಮಿಸಬೇಕಾಗಿದೆ, ಸಂಚಾರಿ ನಿಯಮಗಳ ಪಾಲನೆ ಮಾಡಬೇಕು, ವ್ಯಸನಿಗಳಾದರೆ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ಭವಿಷ್ಯದ ನಿಜವಾದ ರೂವಾರಿಗಳು ಉತ್ತಮ ಶಿಕ್ಷಣ ಪಡೆದು ಗುರಿ ಮುಟ್ಟಲು ಸಲಹೆ ನೀಡಿದರು. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಯಾರಾದರು ಕಾಟ ನೀಡಿದರೆ ಶಿಕ್ಷಗೆ ಗುರಿಯಾಗಬೇಕಾಗುತ್ತದೆ ಎಲ್ಲರು ಪ್ರೀತಿ, ಸಹಬಾಳ್ವೆಯಿಂದ ಜೀವನ ನಡೆಸಬೇಕು ಇಲಾಖೆ ಸದಾ ನಿಮ್ಮೊಂದಿಗೆ ಇದೆ ಅಹಿತಕರ ಘಟನೆಗಳು ನಡೆದರೆ ಸಹಾಯವಾಣಿಗೆ ಕರೆ ಮಾಡಲು ತಿಳಿಸಿದರು.
ಆರಕ್ಷಕ ವೃತ್ತ ನಿರೀಕ್ಷಕ ಪ್ರಕಾಶ ಯಾತನೂರ, ಉಪ ನಿರೀಕ್ಷಕ ದಿನೇಶ ಎಂ.ಟಿ ಇವರು ಪರಾಧ ತಡೆ ಮಾಸಾಚರಣೆ, ಮಾದಕ ವಸ್ತುಗಳ ವ್ಯಸನ ಮುಕ್ತ ಜಾಗೃತಿ ಕುರಿತು ಮಾಹಿತಿ ನೀಡಿದರು. ತಾಪಂ ಮಾಜಿ ಸದಸ್ಯ ಸಾತಲಿಂಗಪ್ಪ ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷ ಪಂಡಿತ ಜಿಡಗೆ, ಮಾಜಿ ಸದಸ್ಯ ಪಂಡಿತ ಖಾನಾಪೂರೆ, ನ್ಯಾಯವಾದಿ ಮಲ್ಲಿನಾಥ ಗೋವಿನ, ಕಾಲೇಜಿನ ಖಮರುದ್ದೀನ , ಶಿಕ್ಷಕ ವಿರುಪಾಕ್ಷಪ್ಪ ಬಿರಾದಾರ, ಶಿಕ್ಷಕ ಜ್ಯೋತಿ ರೂಪನೂರೆ, ರೂಪಾಶ್ರೀ ಮೈಂದರ್ಗಿ ಇದ್ದರು. ಸಾಕ್ಷಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಗೀತೆ ಹೇಳಿಕೊಟ್ಟರು. ಬಳಿಕ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದರು.