ವ್ಯಸನ ಮುಕ್ತರಾಗಲು ಕುಶಲ ಕರ್ಮಿಗಳಿಗೆ ಕರೆ

ಔರಾದ :ಆ.2: ಯುವಕರು ಆತ್ಮವಿಶ್ವಾಸದೊಂದಿಗೆ ಕಾಯಕ ಜೀವಿಗಳಾಗಿ ಆರೋಗ್ಯವಂತರಾಗಿ ಸುಮಧುರ ಜೀವನ ಸಾಗಿಸಿದರೆ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ಯುವಕರು ಹಣ ಕೊಟ್ಟು ಆರೋಗ್ಯ ಹಾಳು ಮಾಡಿಕೊಳ್ಳದಿರಲು ಶಿವಶಂಕರ ಟೋಕರೆ ಮನವಿ ಮಾಡಿದರು.

ಪಟ್ಟಣದ ಬಸವನ ತಾಂಡಾ ಮುಂಗನಾಳ ರಸ್ತೆಯಲ್ಲಿ ಸರಕಾರಿ ಐಟಿಐ ದಲ್ಲಿ ಇಂದು ಸರಕಾರಿ, ಅನುದಾನಿತ, ಅನುದಾರಹಿತ ಐಟಿಐಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವ್ಯಸನಮುಕ್ತ ದಿನಾಚರಣೆಯಲ್ಲಿ ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡುತ್ತ ಇಂದು ಅನೇಕ ಯುವಕರು ಮಾದಕ ವಸ್ತು, ತಂಬಾಕು ಸೇವನೆಯಿಂದ ಜೀವನ ಜರ್ಝರಿತಗೊಂಡು ಇದು ಸಮಾಜಕ್ಕೆ ಮಾರಕವಾಗುತ್ತಿದೆ.

ಯುವಕರಾದವರು ತನ್ನ ಗಳಿಕೆ ಜೊತೆಗೆ ಆರೋಗ್ಯದ ಕಡೆಗೆ ಗಮನ ಹರಿಸಲೇ ಬೇಕು. ಜೀವನ ಆರೋಗ್ಯವಾಗಿದ್ದರೆ ಏನೆಲ್ಲಾ ಸಾಧಿಸಬಹುದು. ಬಲಶಾಲಿ ಆನೆ, ವಿಷಜಂತು ಹಾವು, ಅತ್ಯಂತ ಹೊಲಸು ಹಂದಿ ಮುಟ್ಟಲಾರದ ತಂಬಾಕು ಮನುಷ್ಯ ಇಂದು ವಿಷ ಸೇವಿಸಿ ಅನೇಕ ರೋಗಗಳಿಗೆ ತುತ್ತಾಗುತ್ತಿರುವುದು ವಿಪರ್ಯಾಸದ ಸಂಗತಿ, ಯುವಕರಿಗೆ ತನ್ನ ಜೀವನದ ಗುರಿ ಮುಟ್ಟಲು ವ್ಯಸನ ಮುಕ್ತರಾಗುವುದು ಅತ್ಯಂತ ಅವಶ್ಯಕತೆಯಾಗಿದೆ. ನಮ್ಮಲ್ಲಿ ಅನೇಕ ಕೌಶಲ್ಯ ಯುಕ್ತವಾದ ತರಬೇತಿಗಳಿವೆ. ಕೌಶಲ್ಯ ಕಲಿಯಿರಿ ಉದ್ಯೋಗಿಗಳಾಗಿರಿ ಇದರಿಂದ ಕೌಟುಂಬಿಕ ಸಮೃದ್ಧಿಯೊಂದಿಗೆ ಭವ್ಯ ಭಾರತ ಕಟ್ಟಬಹುದಾಗಿದೆ ಎಂದು ಕಿವಿ ಮಾತು ಹೇಳಿದರು.

ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಮಿರ್ಜಾ ಅಸಾದುಲ್ಲಾ ಬೇಗ್ ತರಬೇತಿದಾರರಿಗೆ ಪ್ರತಿಜ್ಞಾವಿಧಿ ಬೊಧಿಸಿ ವ್ಯಸನ ಮುಕ್ತರಾಗಲು ಮನವಿ ಮಾಡಿದರು. ಮೊದಲಿಗೆ ಸಂಸ್ಥೆಯ ಅಧೀಕ್ಷಕ ಸತೀಷಕುಮಾರ ಬೆಳ್ಳುರೆ ಸ್ವಾಗತಿಸಿದರು, ಯುಸೂಫ್ ಮಿಯ್ಯಾ ಜೊಜನಾ ನಿರೂಪಿಸಿದರೆ ಸಂಗಮೇಶ ಮರ್ಕಲೆ ವಂದಿಸಿದರು. ಪ್ರತಿಜ್ಞಾ ಬೊಧನಾ ಹಾಗೂ ವ್ಯಸನ ಮುಕ್ತ ದಿನಾಚರಣೆ ಸಮಾರಂಭದ ವೇದಿಕೆ ಮೇಲೆ ರಾಜೀವ ಗಾಂಧಿ ಐಟಿಐನ ಅಶೋಕ, ಎಸ್‍ವ್ಹಿಎಸ್ ಐಟಿಐನ ಯುವರಾಜ ಪಾಟೀಲ್, ಪಟ್ಟದ್ದೇವರು ಐಟಿಐ ಕಾಲೇಜು ಪ್ರಾಚಾರ್ಯ ಸತೀಶ ಗಂಧಿಗುಡೆ, ರೂರಲ್ ಐಟಿಐನ ಉಮಾಕಾಂತ ಹಂಡೆ, ವಿಶ್ವೇಶ್ವರಯ್ಯಾ ಐಟಿಐನ ರವಿ ಬಳತ ಜೊತೆಗೆ ಸುಮಾರು 270 ತರಬೇತಿದಾರರು ಹಾಗೂ 10 ಐಟಿಐನ ಸಿಬ್ಬಂದಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು