ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಶ್ರೀಗಳು

ತುಮಕೂರು, ನ. ೩- ಶರಣ ಬಸವ ಶ್ರೀಗಳು ಸಮುದಾಯವನ್ನು ಮೌಢ್ಯತೆಯಿಂದ ವೈಚಾರಿಕತೆಯ ಪಥಕ್ಕೆ ತಂದವರು. ಮುಗ್ಧರನ್ನು ಪ್ರಬುದ್ಧರನ್ನಾಗಿಸಿದವರು. ಕಂದಾಚಾರ ಪರಂಪರೆಯಿಂದ ಶರಣ ಪರಂಪರೆಗೆ ಮತ್ತೊಮ್ಮೆ ಸೆಳೆದವರು. ಶ್ರಮಿಕ ವರ್ಗವನ್ನು ಅಕ್ಷರದ ವಾರಸುದಾರರನ್ನಾಗಿಸಿದವರು ಎಂದು ಚಿತ್ರದುರ್ಗ-ಬಾಗಲಕೋಟದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ವತಿಯಿಂದ ಏರ್ಪಡಿಸಿದ್ದ ಲಿಂಗೈಕ್ಯ ಶ್ರೀ ಶರಣಬಸವ ಮಹಾಸ್ವಾಮಿಗಳ ೧೨ನೇ ಸ್ಮರಣೋತ್ಸವದ ವೆಬಿನಾರ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಸಂಘಟಿತ ಸಮಾಜವನ್ನು ಧಾರ್ಮಿಕತೆಯ ತಳಹದಿಯಲ್ಲಿ ಸಂಘಟಿಸಿದವರು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು. ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಎನ್ನುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಜನಾಂಗದಲ್ಲಿ ಜಾಗೃತಿ ಮೂಡಿಸಿದರು. ಭೋವಿ ಗುರುಪೀಠದ ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಿದರು. ಭೋವಿ ನಿಗಮದ ಸ್ಥಾಪನೆಗೆ ಸಂಕಲ್ಪ ಮಾಡಿದವರು. ಜಾತ್ಯತೀತವಾಗಿ, ಪಕ್ಷಾತೀತವಾಗಿ ಭಕ್ತಿಯ ಸ್ನೇಹವನ್ನು ಚಾಚಿದ್ದರು. ಮಠದಲ್ಲಿ ಉಚಿತ ಪ್ರಸಾದ ನಿಲಯ ಸ್ಥಾಪಿಸಿದರು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಂ.ಗಂಗಾಧರಯ್ಯ ಮಾತನಾಡಿ, ಸಮುದಾಯದಲ್ಲಿ ಶಿಕ್ಷಣದ ಕೊರತೆ, ಪಡೆದ ಶಿಕ್ಷಣದ ಮನವರಿಕೆಯ ಕೊರತೆ, ಉದಾಸೀನತೆ ನಮ್ಮನ್ನು ಹೆಚ್ಚು ಆವರಿಸಿದೆ. ಇತರೆ ಸಮುದಾಯಗಳು ಭೋವಿ ಸಮುದಾಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡು ಅಭಿವೃದ್ಧಿಯಾಗುತ್ತಿವೆ. ನಾವು ಅಲ್ಪತೃಪ್ತಿಗೋಸ್ಕರ ನಮ್ಮತನವನ್ನು ಮಾರಿಕೊಳ್ಳುತ್ತಿದ್ದೇವೆ. ಇದನ್ನು ಬಿಟ್ಟಾಗ ಮಾತ್ರ ನಮ್ಮಧ್ಯೇಯ, ಅಭಿಲಾಷೆಗಳನ್ನು ಈಡೇರುತ್ತವೆ. ಆ ಮೂಲಕ ಸಮುದಾಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸಮುದಾಯದಲ್ಲಿ ಶಿಕ್ಷಣ ಪಡೆದವರು ಕೂಡ ಜಾಗೃತಿಯ ಕೊರತೆಯಿಂದ ಹಿಂದುಳಿದಿದ್ದಾರೆ. ಕಾಲ ಎಳೆಯುವ ಪ್ರವೃತ್ತಿ ಕಡಿಮೆಯಾಗಿ ಉತ್ತೇಜನ ನೀಡುವ ಪ್ರಯತ್ನ ಆಗಬೇಕು. ಸಮುದಾಯ ರಾಜಕೀಯಕ್ಕಾಗಿ ಮಾತ್ರ ಸಂಘಟನೆ ಆಗಬಾರದು. ಶಿಕ್ಷಣ-ಬದುಕು ಜೊತೆಯಾಗಿ ಸಾಗಿದಾಗ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದರು.
ಅರಿವಿನ ಕೊರತೆ, ಆರ್ಥಿಕ ಕೊರತೆ, ಕೀಳರಿಮೆಯ ಆಲೋಚನೆ ನಮ್ಮನ್ನು ಕಾಡುತ್ತಿದೆ. ಸರ್ಕಾರಿ ನೌಕರಿಯಲ್ಲಿರುವವರು, ಅಧಿಕಾರಿಗಳು, ರಾಜಕಾರಣಿಗಳು ಸಮುದಾಯದ ಬಡ ಮಕ್ಕಳನ್ನು ಉತ್ತೇಜಿಸಬೇಕು. ಸಮುದಾಯವನ್ನು ಸಹಭಾಗಿತ್ವದಲ್ಲಿಕೊಂಡೊಯ್ಯುವ ಪ್ರಯತ್ನ ಮಾಡಬೇಕು. ಸಮುದಾಯದೊಳಗೆ ನೂರಾರು ಸಂಘ ಸ್ಥಾಪಿಸುವುದಕ್ಕಿಂತ ಕೊನೆ ಅಂಚಿನಲ್ಲಿರುವವರನ್ನು ಗುರುತಿಸಿ ಅವರನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು. ಯುವಕರಾದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳಿಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ. ಅವರು ಬದ್ಧತೆಯಿಂದ, ಜವಾಬ್ದಾರಿಯಿಂದ ಸಮುದಾಯವನ್ನು ಸಹಭಾಗಿತ್ವದ ಕಡೆ ಕೊಂಡೊಯ್ಯಬೇಕು ಎಂದರು.
ಇಮ್ಮಡಿ ಶ್ರೀಗಳು ವಚನಕಾರ ಸಿದ್ಧರಾಮನ ಹೆಸರಿನಲ್ಲಿರಾಷ್ಟ್ರಮಟ್ಟದಪ್ರಶಸ್ತಿಯನ್ನು ಸ್ಥಾಪಿಸಬೇಕು.ಕಾಯಕಕ್ಷೇತ್ರದಲ್ಲಿ, ಶೈಕ್ಷಣಿಕ ಸಾಧಕರನ್ನು, ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರನ್ನು ಹಲವು ಸಾಧಕರನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಿಉತ್ತೇಜಿಸುವ ಮೂಲಕ ಸಮಾಜದಉನ್ನತಿಗೆ ಶ್ರಮಿಸಬೇಕುಎಂದರು.
ಜನಾಂಗಕ್ಕೆ ಮೂಲಭೂತ ಪ್ರೇರಣೆ ನೀಡಬೇಕು. ಮಠದಲ್ಲಿಪ್ರತಿತಿಂಗಳು ಪುನಶ್ಚೇತನಕಾರ್ಯಕ್ರಮ ಮಾಡಿಸಮುದಾಯದಲ್ಲಿ ಶಿಕ್ಷಣದ ಮಹತ್ವ, ಬದುಕಿನ ಬಗ್ಗೆ ಮೌಲ್ಯಯುತ ಸಂದೇಶ ನೀಡಬೇಕು.ಉನ್ನತ ಶಿಕ್ಷಣವನ್ನು ಸಮುದಾಯದ ನೆಲೆಯಲ್ಲಿವಿಸ್ತರಿಸಿ ಜಾಗೃತಿ ಮೂಡಿಸಬೇಕುಎಂದರು.
ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ವಚನಕಾರ ಸಿದ್ಧರಾಮನ ಅಧ್ಯಯನ ಪೀಠಕ್ಕೆ ಅನುಷ್ಠಾನ ನೀಡಬೇಕು. ಭೋವಿ ಅಭಿವೃದ್ಧಿ ನಿಗಮದ ಮೂಲಕ ಅಸಹಾಯಕರಿಗೆ, ನಿರ್ಗತಿಕರಿಗೆ ಅನುದಾದನ ನೀಡಬೇಕು. ಉನ್ನತ ಶಿಕ್ಷಣ ಮಾಡುತ್ತಿರುವವರಿಗೆ ಸಹಾಯಧನ ನೀಡಬೇಕು ಎಂದು ಸಲಹೆ ನೀಡಿದರು.
ಕೆಎಎಸ್ ನಿವೃತ್ತ ಅಧಿಕಾರಿ ಚಿಕ್ಕವೆಂಕಟಪ್ಪ ಮಾತನಾಡಿ, ಸಮುದಾಯ ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಸೊರಗಿದೆ. ಸದಾಶಿವ ಆಯೋಗ ಜಾರಿಗೆ ಬಂದರೆ ನಾವು ಮತ್ತಷ್ಟು ಸೊರಗುತ್ತೇವೆ. ಆಯೋಗದಿಂದ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತದೆ. ವರದಿ ಜಾರಿಯಾದರೆ ಸಮುದಾಯ ಬೀದಿಗೆ ಬೀಳುವ ಪರಿಸ್ಥಿತಿ ಬರುತ್ತದೆ. ಪರಿಶಿಷ್ಟ ಜಾತಿಯ ಎರಡು ಪ್ರಬಲ ಸಮುದಾಯಗಳು ಭೋವಿ ಸಮುದಾಯವನ್ನು ಆಯೋಗದ ಮೂಲಕ ತುಳಿಯುವ ಪ್ರಯತ್ನ ಮಾಡುತ್ತಿವೆ. ಆದ್ದರಿಂದ ಎಲ್ಲರೂ ಜಾಗೃತರಾಗಿ ಸಂಘಟಿತರಾಗಬೇಕು ಎಂದು ಎಚ್ಚರಿಸಿದರು.
ಸಮುದಾಯದ ಜನಪ್ರತಿನಿಧಿಗಳು ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡು ಕೆಲಸ ಮಾಡಬೇಕು. ಸಮುದಾಯದಲ್ಲಿ ನೂರಾರು ಸಂಘಗಳಿವೆ. ಆದರೆ ಯಾವುದೇ ಕೆಲಸ ಆಗುತ್ತಿಲ್ಲ. ಹೆಚ್ಚೆಚ್ಚು ಸಂಘಗಳಿಂದ ಸಮುದಾಯ ಸಂಘಟಿತವಾಗುವುದಿಲ್ಲ. ಸಂಘಗಳಿಂದ ಇದುವರೆಗೂ ಸಾರ್ಥಕವಾದ ಕೆಲಸವಾಗಿಲ್ಲ. ಬಡವರನ್ನು, ನಿಕೃಷ್ಟರನ್ನುಕೈ ಹಿಡಿದು ಮೇಲೆತ್ತಬೇಕುಎಂದರು.
ಗಜೇಂದ್ರಗಢದ ಸಾಹಿತಿ ಎಫ್.ಎಸ್.ಕರಿದುರಗನವರ್ ಮಾತನಾಡಿ, ಸಮುದಾಯದಜನರನ್ನು ಮೌಢ್ಯಗಳಿಂದ, ದುಶ್ಚಟಗಳಿಂದ ಮುಕ್ತಗೊಳಿಸಲು ಲಿಂಗೈಕ್ಯ ಶರಣ ಬಸವಶ್ರೀಗಳು ನಾಡಿನಾದ್ಯಂತ ಸಂಚರಿಸಿ ಅರಿವು ಮೂಡಿಸಿದರು. ಮಕ್ಕಳಿಗೆ ಶಿಕ್ಷಣ ನೀಡಿ, ಕಾಯಕಕ್ಕೆ ಒತ್ತು ನೀಡುವ ಜತೆಗೆ, ತತ್ವ ಸಿದ್ಧಾಂತ ಬೋಧನೆ ಮೂಲಕ ಪ್ರಾಣಿಹಿಂಸೆ ತಡೆಯಲು ಪ್ರಯತ್ನಿಸಿದರು ಎಂದರು.
ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ನಿವೃತ್ತ ಅಧಿಕಾರಿ ಶಿವರುದ್ರಯ್ಯಸ್ವಾಮಿ, ಭೋವಿಗುರುಪೀಠದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ, ಅಶೋಕ್ ಲಿಂಬಾವಳಿ, ಸಿದ್ಧರಾಮಪ್ಪ ಪಾತ್ರೋಟಿ, ಚಂದ್ರು ಪಾತ್ರೋಟಿ, ಹುಲ್ಲಪ್ಪ ಹಳ್ಳೂರು ಮತ್ತಿತರರು ಭಾಗವಹಿಸಿದ್ದರು.