ವ್ಯಸನಮುಕ್ತ ದಿನಾಚರಣೆ

ಅರಸೀಕೆರೆ, ಆ. ೩- ಮಹಾಂತ ಜೋಳಿಯ ಮೂಲಕ ಜನರ ದುಶ್ಚಟಗಳನ್ನು ಬಿಡಿಸಲು ಬೀದಿಗಿಳಿದು ನಾಡಿನಾದ್ಯಂತ ಹೆಸರಾದ ಇಳಕಲ್ಲಿನ ಶ್ರೀ ಮಹಾಂತ ಸ್ವಾಮೀಜಿ ಯವರ ಜನ್ಮದಿನಾಚರಣೆಯನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಡಾ. ಮಹಾಂತ ಶಿವಯೋಗಿ ಜನ್ಮ ದಿನಾಚರಣೆ ಅಂಗವಾಗಿ ನಗರದ ಪ್ರವಾಸಿ ಮಂದಿರದಿಂದ ವಿವಿಧ ರಸ್ತೆಗಳಲ್ಲಿ ಹೊರಟ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಲಿತರು ಹಾಗೂ ಮಹಿಳೆಯರಿಗೆ ಸಮಾನತೆ ತಂದುಕೊಡಲು ಡಾ.ಮಹಾಂತ ಸ್ವಾಮೀಜಿಯವರು ಸಾಕಷ್ಟು ಶ್ರಮಿಸಿದ ಮಹಾನ್ ದಾರ್ಶನಿಕರು ಕೂಡ ಆಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ವಿವಿಧ ಬಿರುದಾಂಕಿತಗಳಿಗೆ ಒಳಗಾಗಿದ್ದ ಅವರು ಬಡ್ಡಿ ರಹಿತ ಸಾಲವನ್ನು ಮಹಿಳೆಯರಿಗೆ ನೀಡುವುದರ ಮೂಲಕ ಹೊಲಿಗೆ ಯಂತ್ರ, ಹಸು ಸಾಗಣಿಕೆ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿದರು. ಶರಣ ಬಸವಣ್ಣನವರ ಸಿದ್ದಾಂತಗಳ ಅಡಿಯಲ್ಲಿ ಕಾಯಕ ಸಂಜೀವಿನಿ ಎಂಬ ಶಿಕ್ಷಣ ಸಂಸ್ಥೆಗಳನ್ನು ಕೂಡಾ ಸಂಸ್ಥಾಪಿಸಿದ್ದರು. ಕುಟುಂಬಗಳ ಏಳ್ಗೆಗೆ ಮಾರಕವಾಗಿದ್ದ ಗಂಡಸರ ದುಶ್ಚಟಗಳು ಸೇರಿದಂತೆ ಸಮಾಜದ ಅನೇಕ ಅಂಕು ಡೊಂಕುಗಳನ್ನು ಸರಿಪಡಿಸಿ ತೊಡೆದು ಹಾಕಲು ತಮ್ಮದೇ ಶಿಷ್ಯವೃಂದದವರೊಂದಿಗೆ ಶ್ರಮಿಸಿದ್ದರು. ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಅವರು ಹಾಕಿಕೊಟ್ಟಿರುವ ಮಾರ್ಗದರ್ಶನಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಂಡು ಮಕ್ಕಳಲ್ಲೂ ವ್ಯಸನಗಳು ಸುಳಿಯದಂತೆ ಎಚ್ಚರಿಕೆ ವಹಿಸಿ ಸ್ವಸ್ಥ್ಯ ಸಮಾಜವನ್ನು ಕಟ್ಟೋಣ ಎಂದು ಕರೆ ನೀಡಿದರು.
ಜಾಥ ಕಾರ್ಯಕ್ರಮದ ನಂತರ ವೆಂಕಟೇಶ್ವರ ಕಲಾಭವನದಲ್ಲಿ ಏರ್ಪಡಿಸಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ಸಿ.ಗಿರೀಶ್, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಸಾರ್ವಜನಿಕ ಶಿಕ್ಷಣ ಇಲಾಖೆ ಬಿಇಓ ಮೋಹನ್‌ಕುಮಾರ್, ಡಿವೈಎಸ್‌ಪಿಡಿ ಅಶೋಕ್, ಗ್ರೇಡ್-೨ ತಹಶೀಲ್ದಾರ್ ಪಾಲಾಕ್ಷ, ಶಿರಸ್ತೆದಾರ್ ಶಿವಶಂಕರ್, ಕಸಬಾ ರಾಜಸ್ವ ಶಿವಾನಂದ್ ನಾಯಕ್, ತಾ.ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.