ವ್ಯಸನಕ್ಕೆ ದುರ್ಬಲ ಮನಸ್ಸು ಮತ್ತು ವ್ಯಕ್ತಿತ್ವವೇ ಕಾರಣ: ಹೆಗ್ಗಡೆ

ಉಜಿರೆ, ಮಾ.೨೨- “ಮನುಷ್ಯ ಜೀವನದಲ್ಲಿ ಬರುವ ಕಷ್ಟ, ನಷ್ಟ, ನೋವುಗಳನ್ನು ಮರೆಯಲು ಬಹುತೇಕ ಮಂದಿ ದುಶ್ಚಟಗಳ ದಾಸರಾಗುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ ಸ್ವಾಭಾವಿಕವಾಗಿ ಅನೇಕ ಪಾಪಕೃತ್ಯಗಳಿಗೆ, ಆರ್ಥಿಕ, ಸಾಮಾಜಿಕ, ನಷ್ಟಗಳಿಗೆ ದುರಭ್ಯಾಸಗಳು ದಾರಿ ಮಾಡುತ್ತದೆ. ದುರ್ಬಲ ವ್ಯಕ್ತಿತ್ವ, ದುರ್ಬಲ ಮನಸ್ಸುಗಳೇ ವ್ಯಸನಕ್ಕೆ ಪ್ರಮುಖ ಕಾರಣ. ಮನಸ್ಸಿನ ಸಬಲೀಕರಣ ಹಾಗೂ ವ್ಯಕ್ತಿತ್ವ ವಿಕಸನ ಮಾಡುವುದರ ಜೊತೆಗೆ ಅಂತರಂಗದ ಭಾವನೆಗಳಿಗೆ ಆಧ್ಯಾತ್ಮಿಕ ಸ್ಪರ್ಷ ನೀಡಿ, ವ್ಯಸನದಿಂದಾದ ದೈಹಿಕ, ಮಾನಸಿಕ ತೊಂದರೆಗಳಿಗೆ ವೈಜ್ಞಾನಿಕ ಪರಿಹಾರ ನೀಡುತ್ತಾ ರೋಗಮುಕ್ತಗೊಳಿಸುವ ಕೆಲಸ ಶಿಬಿರದಲ್ಲಿ ನಡೆಸಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಸಲಾದ ೧೫೯ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ೬೪ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶಿಬಿರದ ೫ನೇ ದಿನದಲ್ಲಿ ಡಾ| ಹೆಗ್ಗಡೆಯವರು ಆಗಮಿಸಿ ವೈಯಕ್ತಿಕವಾಗಿ ವ್ಯಸನಿಗಳ ಯೋಗಕ್ಷೇಮ ವಿಚಾರಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ೮ ದಿನಗಳ ಕಾಲ ನಡೆಯಲಿರುವ ಈ ಶಿಬಿರದ ಸಮಾರೋಪ ಸಮಾರಂಭದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್.ಮಂಜುನಾಥ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಸ್ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ರಾಜೇಂದ್ರದಾಸ್, ಯೋಜನಾಧಿಕಾರಿ ಶ್ರೀ ಕೆ. ಮೋಹನ್, ಶಿಬಿರಾಧಿಕಾರಿ ಶ್ರೀ ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕರಾಗಿ ಶ್ರೀಮತಿ ಫಿಲೋಮಿನಾ ಡಿ’ಸೋಜ, ಶ್ರೀ ವೆಂಕಟೇಶ್ ಉಪಸ್ಥಿತರಿದ್ದರು.

ದೃಢಸಂಕಲ್ಪವೇ ಮದ್ದು

ವ್ಯಸನವುಳ್ಳ ವ್ಯಕ್ತಿಗೆ ಬೈಯುವುದು, ಹಿಂಸೆ ನೀಡುವುದು, ಹೆದರಿಸುವುದು ಎಲ್ಲವೂ ವ್ಯರ್ಥ. ಹೇಗೆ ಕಾಯಿಲೆಯೋ, ಹಾಗೆಯೇ ಚಿಕಿತ್ಸೆ ಎಂಬಂತೆ ಪ್ರತಿಯೊಬ್ಬ ವ್ಯಸನಿಯ ಕಥೆ, ವ್ಯಥೆ ವಿಭಿನ್ನವಾಗಿರುತ್ತದೆ. ಅಮಲಿನ ಸೇವನೆಯಲ್ಲಿ ಎಲ್ಲರೂ ಸಮಾನರೇ. ರೋಗದ ವಿಷಯಕ್ಕೆ ಬಂದಾಗ ಕುಡಿತ ಬೇರೆ ಬೇರೆ ಜನರಲ್ಲಿ ವಿಭಿನ್ನ ರೀತಿಯ ತೊಂದರೆ ನೀಡಬಹುದು. ಅದನ್ನು ವೈಯಕ್ತಿಕವಾಗಿಯೇ ಸ್ಪಂದಿಸಿ ಪರಿಹಾರ ಒದಗಿಸುವುದು ಬಹಳ ಮುಖ್ಯ. ಇಷ್ಟಾದರೂ ವ್ಯಸನಿಗೆ ದೃಢಸಂಕಲ್ಪವಿಲ್ಲದಿದ್ದರೆ ಚಿಕಿತ್ಸೆ ಫಲಿಸುವುದಿಲ್ಲ. ವ್ಯಸನಮುಕ್ತಿಗೆ ದೃಢಸಂಕಲ್ಪವೇ ಮದ್ದು.

ಡಾ| ಡಿ. ವೀರೇಂದ್ರ ಹೆಗ್ಗಡೆಯವರು