
ರಾಯಚೂರು,ಏ.೧೮- ಕನ್ನಡ ಸಂವೇದನೆಗೆ ಕುವೆಂಪು ಹಾಗೂ ಬೇಂದ್ರೆಯವರ ಕೊಡುಗೆ ಅಪಾರವಾದದ್ದು, ನವೋದಯ ಸಾಹಿತ್ಯದ ಮೂಲಕ ಇವರು ತಮ್ಮ ಬರಹಗಳ ಮೂಲಕ ಲೋಕ ಪ್ರಜ್ಞೆಯನ್ನು ಮೂಡಿಸಿದ್ದಾರೆ. ವ್ಯವಸ್ಥೆಯಲ್ಲಿ ಅಲ್ಲ ಅಂತರಂಗದಲ್ಲಿ ಬದಲಾವಣೆ ಮೂಡಿದಾಗ ಪರಿವರ್ತನೆ ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಗೀತಾ ವಸಂತ ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿಂದು ಆಯೋಜಿಸಿದ ನವೋದಯ ಸಾಹಿತ್ಯದ ಎರಡು ಶಿಖರಗಳು-ಕುವೆಂಪು ಹಾಗೂ ಬೇಂದ್ರೆ ಎಂಬ ಶೀರ್ಷಿಕೆಯ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಷಯ ಪರಿಣಿತರಾಗಿ ಆಗಮಿಸಿದ ಇವರು ಮಾತನಾಡುತ್ತ ನವೋದಯ ಎನ್ನುವುದು ನಮ್ಮೊಳಗೆ ಹೊಸತನ ಮೂಡಿಸಿಕೊಂಡ ಯುಗ. ಸಾಕಷ್ಟು ಸ್ಥಿತಿಗಳಲ್ಲಿ ನಮ್ಮನ್ನು ನಾವೇ ಮರೆತ ಸ್ಥಿತಿ, ವಿಸ್ಮೃತಿಯಿಂದ ಮಾನಸಿಕ ಅಸ್ಥಿರತೆಯಿಂದ ಹೊರಬಂದು ಪರಿವರ್ತನೆಯನ್ನು ಸ್ವಾಗತಿಸಿದ ಯುಗ ನವೋದಯ. ಸಕಲ ಚರಾಚರಗಳಲ್ಲಿರುವ ಚೈತನ್ಯ ಬೇರೆ ಅಲ್ಲ ಆ ಅಖಂಡ ದೃಷ್ಠಿಯೇ ಆಧ್ಯಾತ್ಮ, ಆಧ್ಯಾತ್ಮ ಹಾಗೂ ವಿಜ್ಞಾನ ಕಾಲಕಾಲಕ್ಕೆ ಬದಲಾಗುತ್ತದೆ.
ಕುವೆಂಪು ಅವರ ರಾಮಾಯಣ ಶಿಕ್ಷಣವನ್ನು ಮುಖ್ಯವಾಗಿಸಿದೆ. ಮಾನವರೆಲ್ಲ ಒಂದೇ ಎನ್ನುವ ವಿಶ್ವಮಾನವ ಹಾಗೂ ಹೃದಯಗಳ ಬೆಸೆಯುವ ಸ್ನೇಹ ಉಂಟಾಗಲೆಂದು ಬೇಂದ್ರೆಯವರ ವಿಶ್ವಮೈತ್ರಿ ಪರಿಕಲ್ಪನೆ ವಿವರಿಸುತ್ತಾ ನಾವು ಶ್ರೇಷ್ಠ-ಕನಿಷ್ಠ ಎನ್ನುವ ವಿಚಾರಗಳನ್ನು ತೊಲಗಿಸಿ ಮೌಢ್ಯತೆಯಿಂದ ಹೊರಗೆ ಬರಬೇಕು, ನಮ್ಮ ಸಂವೇದನೆ ಸಾಹಿತ್ಯದ ಜೊತೆ ಬೆರೆತಾಗ ಪುಸ್ತಕದ ಜೀವ ಬೆಲೆ ಗೊತ್ತಾಗುವುದು ಹಾಗಾಗಿ ವಿದ್ಯಾರ್ಥಿಗಳು ಪಠ್ಯಕ್ರಮದ ಪುಸ್ತಕಗಳನ್ನು ಓದುವ ಜೊತೆಗೆ ಹೆಚ್ಚಾಗಿ ಸಾಹಿತ್ಯಾಧಾರಿತ ಪುಸ್ತಕಗಳನ್ನು ಓದಿರಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಾಜ ವಿಜ್ಞಾನ ನಿಕಾಯದ ಡೀನರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರು ಪ್ರೊ.ನುಸ್ರತ್ ಫಾತೀಮಾ ಮಾತನಾಡಿ, ಭಿನ್ನತೆಯಲ್ಲಿ ಏಕತೆ ಇರುವ ಹಾಗೆ ಕನ್ನಡಾಭಿಮಾನದ ಜೊತೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ವ್ಯಕ್ತಿಗೆ ಬದಲಾವಣೆ ಬೇಕು ಆದರೆ ಆ ಬದಲಾವಣೆ ವ್ಯಕ್ತಿಯ ಸಮಾಜದ ವಿಕಾಸವನ್ನು ವಿನಾಶಮಾಡಬಾರದು. ಕುವೆಂಪು ಮತ್ತು ಬೇಂದ್ರೆಯವರ ಭಿನ್ನತೆ ಸಾಮ್ಯತೆ ಗಮನಿಸಿದರೆ ಕನ್ನಡ ಭಾಷೆಯ ಮೇಲೆ ಅವರ ಅಭಿಮಾನ ಶ್ಲಾಘನೀಯ. ನವೋದಯ ಸಾಹಿತ್ಯ ಸೃಷ್ಠಿಸಿ ನಾಡಿಗೆ ಕೀರ್ತಿ ತಂದ ಎರಡು ಶಿಖರಗಳಾದ ಕುವೆಂಪು ಬೇಂದ್ರೆ ನಮ್ಮ ಜೀವನಕ್ಕೆ ಮಾರ್ಗಗಳು ಎಂದು ನುಡಿದರು.
ಉಪಕುಲಸಚಿವ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದರ, ಮಾತನಾಡುತ್ತ ಬೇರೆ ಬೇರೆ ವಿಶ್ವವಿದ್ಯಾಲಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಿಷಯಗಳಲ್ಲಿ ಪರಿಣಿತಿಯನ್ನು ಪಡೆದ ಅಧ್ಯಾಪಕರನ್ನು ಕರೆಯಿಸಿ ಅವರ ವಿಚಾರಗಳು ವಿಷಯಗಳು ಬೋಧನೆ ಹೊಸ ವಿಶ್ವವಿದ್ಯಾಲವಾದ ನಮ್ಮ ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಿಗಲಿ ನವೋದಯವೆಂಬ ಜ್ಞಾನ ನಮ್ಮ ಮಕ್ಕಳಲ್ಲಿ ಬೆಳೆಯಲಿ ಎಂಬ ನಿಟ್ಟಿನಲ್ಲಿ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಇನ್ನು ಹೆಚ್ಚು ಮೂಡಿಬರಲಿವೆ ಎಂದರು.
ಈ ಸಂದರ್ಭದಲ್ಲಿ ವಿಜ್ಞಾನ ನಿಕಾಯ ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಕನ್ನಡ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಶಿವರಾಜ ಯತಗಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ.ಶಿವಲೀಲಾ ಅತಿಥಿ ಪರಿಚಯ ನೀಡಿದರು, ವಿದ್ಯಾರ್ಥಿಗಳಾದ ಸುಭಾಷ ನಿರೂಪಿಸಿದರು, ಕವಿತಾ ಸಂಗಡಿಗರು ಪ್ರಾರ್ಥಿಸಿದರು, ಕಾವೇರಿ ಸ್ವಾಗತಿಸಿದರು, ರಮೇಶ ವಂದಿಸಿದರು. ಅತಿಥಿ ಉಪನ್ಯಾಸಕರಾದ ಡಾ.ಮಲ್ಲೇಶಪ್ಪ ಛಲುವಾದಿ, ಡಾ.ಶರಣಪ್ಪ ಛಲುವಾದಿ, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.