ವ್ಯಕ್ತಿ ಸಾವು: ಮಹೀಂದ್ರಾ ಸೇರಿ 13 ಮಂದಿ ವಿರುದ್ಧ ಕೇಸ್

ಕಾನ್ಪುರ ,ಸೆ.೨೬-ಉತ್ತರ ಪ್ರದೇಶದ ಕಾನ್ಪುರದಲ್ಲಿ, ವ್ಯಕ್ತಿಯೊಬ್ಬರು ತಮ್ಮ ವೈದ್ಯ ಪುತ್ರ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಮಹೀಂದ್ರಾ ಮತ್ತು ಮಹೀಂದ್ರಾ ಕಂಪೆನಿ ಅಧ್ಯಕ್ಷ ಆನಂದ್ ಮಹೀಂದ್ರಾ ಸೇರಿದಂತೆ ೧೩ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರಿನನ್ವಯ ಕಾನ್ಪುರದ ರಾಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವರು ತಮ್ಮ ಮಗನಿಗೆ ಉಡುಗೊರೆಯಾಗಿ ನೀಡಿದ ಸ್ಕಾರ್ಪಿಯೋ ಕಾರಿನಲ್ಲಿ ಏರ್ ಬ್ಯಾಗ್ ಅಳವಡಿಸಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ .ಹೀಗಾಗಿ ಅವರ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ರಾಜೇಶ್ ತನ್ನ ಏಕೈಕ ವೈದ್ಯ ಪುತ್ರ ಅಪೂರ್ವ ಮಿಶ್ರಾಗೆ ಸ್ಕಾರ್ಪಿಯೋ ಕಾರನ್ನು ಉಡುಗೊರೆಯಾಗಿ ನೀಡಿದ್ದು,ಜನವರಿ ೧೪, ೨೦೨೨ ರಂದು, ಅವರ ಮಗ ಅಪೂರ್ವ ಈ ವಾಹನದಲ್ಲಿ ತನ್ನ ಸ್ನೇಹಿತರೊಂದಿಗೆ ಲಕ್ನೋದಿಂದ ಕಾನ್ಸುರಕ್ಕೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಹಲವು ಬಾರಿ ರಸ್ತೆಯ ಮೇಲೆ ಪಲ್ಟಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಭೀಕರ ಅಪಘಾತದ ವೇಳೆ ಡಾ.ಅಪೂರ್ವ ಅವರು ಮತ್ತು ಅವರ ಸ್ನೇಹಿತರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರು. ಇಂತಹ ದೊಡ್ಡ ದುರಂತ ಸಂಭವಿಸಿದ್ದರೂ, ಜೀವ ರಕ್ಷಕವಾದ ಏರ್‌ಬ್ಯಾಗ್ ತೆರೆದುಕೊಂಡಿರಲಿಲ್ಲ.ಈ ಅಪಘಾತದಲ್ಲಿ ಅಪೂರ್ವ ಸಾವನ್ನಪ್ಪಿದ್ದರು.
ತಿರುಪತಿ ಆಟೋಮೊಬೈಲ್ಸ್‌ನಿಂದ ಈ ಕಾರನ್ನು ಖರೀದಿಸಿದ್ದ ಅವರು, ಜನವರಿ ೨೯ರಂದು ಶೋರೂಮ್‌ಗೆ ಕೊಂಡೊಯ್ದು ಕಾರಿನ ದೋಷಗಳ ಬಗ್ಗೆ ತಿಳಿಸಿದ್ದರು. ಸೀಟ್ ಬೆಲ್ಟ್ ಹಾಕಿದ್ದರೂ ಏರ್ ಬ್ಯಾಗ್ ಅಳವಡಿಸದೇ ಕಾರು ಮಾರಾಟ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸರಿಯಾಗಿ ವಾಹನ ತಪಾಸಣೆ ಮಾಡಿದ್ದರೆ ಮಗ ಸಾಯುತ್ತಿರಲಿಲ್ಲ ಎಂದು ರಾಜೇಶ್ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಲು ತೆರಳಿದ ಸಂದರ್ಭದಲ್ಲಿ ಕಂಪನಿಯ ಉದ್ಯೋಗಿಗಳು ಅವರೊಂದಿಗೆ
ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ. ಉದ್ಯೋಗಿಗಳು ತನ್ನ ಮತ್ತು ಕುಟುಂಬದೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ಕೊಲೆ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ. ಬಳಿಕ ಸ್ಕಾರ್ಪಿಯೊವನ್ನು ಮಹೀಂದ್ರಾ ಕಂಪನಿಯ ಶೋರೂಂ ಎದುರು ನಿಲ್ಲಿಸಲಾಗಿತ್ತು. ಕಂಪನಿಯು ಕಾರಿನಲ್ಲಿ ಏರ್‌ಬ್ಯಾಗ್‌ಗಳನ್ನು ಅಳವಡಿಸಿಲ್ಲ ಎಂದು ರಾಜೇಶ್ ಹೇಳಿಕೊಂಡಿದ್ದಾರೆ.
ಇದೀಗ ಆನಂದ್ ಮಹೀಂದ್ರ ಸೇರಿದಂತೆ ೧೩ ಮಂದಿಯ ವಿರುದ್ಧ ರಾಯಪುರ ಪೊಲೀಸ್ ಠಾಣೆಯಲ್ಲಿ ರಾಜೇಶ್ ಎಫ್‌ಐಆರ್ ದಾಖಲಿಸಿದ್ದಾರೆ. ಕಾರನ್ನು ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾನ್ಪುರ ಪೊಲೀಸರು ತಿಳಿಸಿದ್ದಾರೆ.