ವ್ಯಕ್ತಿ ಸಾಯಬಹುದು ವಿಚಾರಗಳು ಸಾಯಲ್ಲ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.27: ವ್ಯಕ್ತಿಯನ್ನು ಸಾಯಿಸಬಹುದು ಆದರೆ ಅವನ ವಿಚಾರಗಳನ್ನು ಸಾಯಿಸಲು ಸಾಧ್ಯವಿಲ್ಲ. ಅವು ಜೀವಂತವಾಗಿರುತ್ತವೆ ಎಂದು ಹೇಳುತ್ತಾ ಇಂಕ್ವಿಲಾಬ್ ಜಿಂದಾಬಾದ್,ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆ ಮೂಲಕ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಹಗಲಿರುಳು ಹೋರಾಡಿದವರು ಕ್ರಾಂತಿವೀರ ಭಗತ್ ಸಿಂಗ್ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 93ನೇ  ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಗತ್ಸಿಂಗ್, ಸುಖ್ದೇವ್ ಹಾಗೂ ರಾಜ್ಗುರು ಅವರು  ದಬ್ಬಾಳಿಕೆ ಸಹಿಸದೆ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸನ್ ಅನ್ನು ಕೊಂದು ಆ ಮೂಲಕ 23ನೇ ಮಾರ್ಚ್ 1931ರಲ್ಲಿ ಈಗಿನ ಪಾಕಿಸ್ತಾನ ದೇಶದ ಲಾಹೋರ್ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದರು.ಅವರ ನೆನಪಿಗಾಗಿ ಪ್ರತಿವರ್ಷ ಹುತಾತ್ಮರ ದಿನವಾಗಿ ಆಚರಿಸುತ್ತೇವೆ.ಆದ್ದರಿಂದ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ದೇಶ ಪ್ರೇಮವನ್ನು ಮೈಗೂಡಿಸಿಕೊಂಡು ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಅಜಯ,ಶಿಲ್ಪ, ಹರ್ಷವರ್ಧನ್, ಗಣೇಶ, ಪ್ರಜ್ವಲ್, ಶರಣ್ ರಾಜ್ ಅವರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಮುನಾವರ ಸುಲ್ತಾನ,ದಿಲ್ಷಾದ್ ಬೇಗಂ, ಸುಮತಿ,ಸುಧಾ, ಶ್ವೇತಾ, ಉಮ್ಮೆಹಾನಿ, ಶಶಮ್ಮ, ರಾಮಾಂಜಿನೇಯ,ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.