ವ್ಯಕ್ತಿ ಪೂಜೆ ಬಿಡಿ ಪಕ್ಷಕ್ಕೆ ಬಾಯಿಮುಚ್ಕೊಂಡು ಕೆಲಸ ಮಾಡಿ

ಬೆಂಗಳೂರು, ಜು. ೨೩- ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಸಿಎಂ ಹುದ್ದೆಯ ಬಗ್ಗೆ ಮಾತನಾಡುತ್ತಿರುವ ನಾಯಕರುಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಕೂಡ ಸಿಎಂ ಅಭ್ಯರ್ಥಿಯೇ. ಸದ್ಯಕ್ಕೆ ಯಾವುದೇ ಹುದ್ದೆ ಖಾಲಿ ಇಲ್ಲ. ನನಗೆ ಸರಿಸಮಾನರಾಗಿ ಮಾತನಾಡುವವರಿಗೆ ಉತ್ತರ ಕೊಡುತ್ತೇನೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಜಮೀರ್ ಅಹಮದ್ ರವರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಶಾಸಕ ಜಮೀರ್ ಅಹಮದ್ ಖಾನ್ ನೀಡಿದ್ದ ಹೇಳಿಕೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಜಮೀರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು. ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿ. ಪಕ್ಷಕ್ಕೆ ನಿಮ್ಮ ಸಮುದಾಯದವರನ್ನು ಸೆಳೆಯಿರಿ, ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಗುಡುಗಿದರು.
ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆಗಳು ಬೇಡ. ಎಲ್ಲ ೨೨೪ ಶಾಸಕರುಗಳಿಗೂ ಆಸೆ, ಆಕಾಂಕ್ಷೆಗಳಿರುತ್ತವೆ. ಎಲ್ಲರೂ ಸಿಎಂ ಅಭ್ಯರ್ಥಿಗಳೇ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಸ್ಪರ್ಧೆಯ ಮಧ್ಯೆ ನಾನು ಹೋಗುವುದಿಲ್ಲ. ನನ್ನದೇ ಆದ ಪ್ರತ್ಯೇಕ ಗುರುತು ಇದೆ ಎಂಬ ಎಂ.ಬಿ. ಪಾಟೀಲ್ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ೨೨೪ ಕ್ಷೇತ್ರಗಳಲ್ಲಿ ಗೆಲ್ಲುವ ಎಲ್ಲರೂ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟರೆ ತಪ್ಪಿಲ್ಲ ಎಂದರು.
ಕೋಲಾರದಲ್ಲಿ ಕಾಂಗ್ರೆಸ್‌ನ ಬೇರೆ ಬೇರೆ ಬಣಗಳ ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೋಲಾರದಲ್ಲಿ ಯಾವುದೇ ಬಣ ಇಲ್ಲ. ಸೋನಿಯಾಗಾಂಧಿಯವರಿಗೆ ರಕ್ಷಣೆ ಸಿಗಬೇಕು ಎಂದು ಎಲ್ಲರೂ ಹೋರಾಟ ಮಾಡುತ್ತಿದ್ದೇವೆ. ಅದರಂತೆ ಕೋಲಾರದಲ್ಲೂ ಪ್ರತಿಭಟನೆ ನಡೆದಿದೆ ಎಂದರು.
ಮುಸಲ್ಮಾನರ ಸಲೂನ್ ಬಂದ್ ಮಾಡಿಸಬೇಕು ಎಂಬ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ. ರಾಜ್ಯದಲ್ಲಿ ಸಂವಿಧಾನ ಬದ್ಧವಾಗಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದು ಪ್ರಮಾಣ ಮಾಡಿರುವ ಮುಖ್ಯಮಂತ್ರಿಗಳು, ಸಚಿವರು ಇದಕ್ಕೆ ಉತ್ತರ ನೀಡಬೇಕು ಎಂದರು.
ರಾಜ್ಯದ ಹಲವು ಭಾಗಗಳಲ್ಲಿ ಪ್ರಮೋದ್ ಮುತಾಲಿಕ್ ಅವರು ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಲಿ. ನಂತರ ನಾನು ಮಾತನಾಡುತ್ತೇನೆ ಎಂದು ಅವರು ಹೇಳಿದರು.