ವ್ಯಕ್ತಿ ಆಧಾರಿತ ಉತ್ಸವ ಜನ ಒಪ್ಪಲ್ಲ

ಬೆಂಗಳೂರು, ಜು. ೨೬- ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನವರ ಜನ್ಮ ದಿನವನ್ನು ಸಿದ್ಧರಾಮೋತ್ಸವವಾಗಿ ಆಚರಿಸುತ್ತಿರುವ ಬಗ್ಗೆ ಮಾತನಾಡಿರುವ ಇಂಧನ ಸಚಿವ ಕೆ. ಸುನಿಲ್‌ಕುಮಾರ್, ಜನತೆ ವ್ಯಕ್ತಿ ಆಧಾರಿತ ಉತ್ಸವಗಳನ್ನು ಒಪ್ಪುವುದಿಲ್ಲ ಎಂದಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಜನೋತ್ಸವದಂತಹ ಕಾರ್ಯಕ್ರಮಗಳನ್ನು ಮೆಚ್ಚುತ್ತಾರೆಯೇ ಹೊರತು ವ್ಯಕ್ತಿ ಆಧಾರಿತ ಉತ್ಸವಗಳನ್ನು ಒಪ್ಪುವುದಿಲ್ಲ ಎಂದರು.
ಯಾವುದೇ ಒಬ್ಬ ವ್ಯಕ್ತಿಯನ್ನು ಆರಾಧಿಸುವ ಉತ್ಸವಗಳನ್ನು ಜನತೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಸಿದ್ಧರಾಮಯ್ಯನವರ ಸಿದ್ಧರಾಮೋತ್ಸವಕ್ಕೆ ತಿರುಗೇಟು ನೀಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಬಹಳ ವ್ಯತ್ಯಾಸವಿದೆ. ಬಿಜೆಪಿ ಯಾವುದೇ ವ್ಯಕ್ತಿ ಆಧಾರಿತ ಕಾರ್ಯಕ್ರಮಗಳನ್ನು ಮಾಡದೆ ಮೂರು ವರ್ಷಗಳ ಅವಧಿಯಲ್ಲಿ ಏನು ಮಾಡಿದೆ ಎಂಬುದನ್ನು ಜನೋತ್ಸವದ ಮೂಲಕ ಜನರ ಮುಂದೆ ಇಡುತ್ತಿದೆ. ಆದರೆ ಕಾಂಗ್ರೆಸ್‌ನವರು ವ್ಯಕ್ತಿ ಆಧಾರಿತ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಂದಿನ ಮುಖ್ಯಮಂತ್ರಿ ಎಂಬ ಮಾತನ್ನು ಸಿದ್ಧರಾಮಯ್ಯ ತಮ್ಮ ಬಾಯಿಲ್ಲಿ ಹೇಳಲಾಗದೆ ತಮ್ಮ ಆಪ್ತ ಜಮೀರ್ ಅಹಮದ್ ಖಾನ್ ಮೂಲಕ ಹೇಳಿಸಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಿಟ್ಟಿಗೆ ಕಾರಣವಾಗಿ ಈಗ ಎಐಸಿಸಿ ಜಮೀರ್ ಅವರಿಗೆ ನೋಟಿಸ್ ನೀಡಿದೆ. ಈ ನೋಟಿಸ್ ಸಿದ್ಧರಾಮಯ್ಯನವರಿಗೆ ನೀಡಿದಂತೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷ ಜಾತಿ ಜಾತಿಗಳ ನಡುವೆ ಒಡಕು ಹುಟ್ಟಿಸುತ್ತಿದೆ. ಸಿದ್ಧರಾಮಯ್ಯ ಸಹ ಅಧಿಕಾರದಲ್ಲಿದ್ದಾಗ ಇದನ್ನೇ ಮಾಡಿದರು. ಇದಕ್ಕೆಲ್ಲಾ ಕಡಿವಾಣ ಹಾಕುವುದಕ್ಕಾಗಿಯೇ ಜಮೀರ್ ಮೂಲಕ ಸಿದ್ಧರಾಮಯ್ಯನವರಿಗೆ ಪರೋಕ್ಷವಾಗಿ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ಕೊಟ್ಟಿದೆ ಎಂದು ಧಾರಾಳವಾಗಿ ಹೇಳಬಹುದು ಎಂದರು.
ಸಮಾಜದಲ್ಲಿರುವ ಪ್ರತಿಯೊಂದು ಸಮುದಾಯಗಳಿಗೆ ಅವಕಾಶ ಕೊಟ್ಟಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಯಾವುದೇ ರಾಜಕೀಯ ಪಕ್ಷ ಒಂದು ಸಮುದಾಯವನ್ನು ನಂಬಿಕೊಂಡು ಸರ್ಕಾರ ಮನ್ನೆಡೆಸಲು ಸಾಧ್ಯವಿಲ್ಲ ಎಂದರು.
ಬಿಜೆಪಿ ವ್ಯಕ್ತಿ ಇಲ್ಲವೆ ಕುಟುಂಬ ಆಧಾರಿತ ಪಕ್ಷ ಅಲ್ಲ. ಇಲ್ಲಿ ಎಲ್ಲರಿಗೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾನಮಾನಗಳು ಸಿಗುತ್ತವೆ ಎಂದರು.