ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಕೊಡುಗೆ ಅನನ್ಯ

ಕಲಬುರಗಿ:ಜು.24: ತನಗಾಗಿ ಏನನ್ನು ಪ್ರಾರ್ಥಿಸದ ತಾಯಿ, ತನಗಾಗಿ ಏನನ್ನು ಮಾಡಿಕೊಳ್ಳದ ತಂದೆ, ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸುವ ಜೀವಿಗಳು. ಮಗುವಿಗೆ ಶಿಕ್ಷಣ, ಸಂಸ್ಕಾರ, ಬುದ್ಧಿಯನ್ನು ನೀಡಿ, ವ್ಯಕ್ತಿಯನ್ನು ಶಕ್ತಿಯನ್ನಾಗಿಸುವಲ್ಲಿ, ಸರ್ವತೋಮುಖ ಬೆಳವಣಿಗೆಗೆ ಪೋಷಕರ ಕೊಡುಗೆ ತುಂಬಾ ಅನನ್ಯವಾಗಿದೆ ಎಂದು ಚಿಂತಕ ನರಸಪ್ಪ ಬಿರಾದಾರ ದೇಗಾಂವ ಅಭಿಮತ ವ್ಯಕ್ತಪಡಿಸಿದರು.

     ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ 'ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಭಾನುವಾರ ಜರುಗಿದ 'ಪೋಷಕರ ದಿನಾಚರಣೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಇಂದಿನ ಯುವಜನತೆ ತಮ್ಮ ಪಾಲಕ-ಪೋಷಕ, ಗುರು-ಹಿರಿಯರನ್ನು ಗೌರವಿಸಬೇಕು. ಪಾಲಕರ ಇಳಿ ವಯಸ್ಸಿನಲ್ಲಿ ವೃದ್ಧಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. 'ಮಾತ್ರು ದೇವೋಭವ-ಪಿತ್ರು ದೇವೋಭವ' ಎಂಬ ಪರಂಪರೆಯನ್ನು ಕಾಪಾಡಬೇಕು. ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂದ ಸತ್ಯವನ್ನು ಮನಗಂಡು ಅವರ ಸೇವೆಯನ್ನು ಮಾಡಬೇಕು ಎಂದು ಅನೇಕ ಸಲಹೆಗಳನ್ನು ನೀಡಿದರು.
 ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ದತ್ತು ಹಡಪದ, ಇಸ್ಮೈಲ್ ಯಳಸಂಗಿ, ಶ್ರೀಶೈಲ್ ಬಿರಾದಾರ, ಲಕ್ಷ್ಮೀ ಹಲ್ದಿ ಸೇರಿದಂತೆ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.