ವ್ಯಕ್ತಿಯ ಅಪಹರಿಸಿ ಚಿನ್ನ ದರೋಡೆ: ಅಂತಾರಾಜ್ಯ ದರೋಡೆಕೋರರ ಸೆರೆ

ಮಂಗಳೂರು, ಮೇ ೨೯- ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನ ಹೊಂದಿದ್ದ ವ್ಯಕ್ತಿಯನ್ನು ಅಪಹರಿಸಿ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಮತ್ತು ಮೂಡಬಿದ್ರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ೧೧ ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ಜೋಕಟ್ಟೆ ತೋಕೂರು ನಿವಾಸಿಗಳಾದ ಅಬ್ದುಲ್ ಸಲಾಂ ಯಾನೆ ಪಟೌಡಿ ಸಲಾಂ (೩೪), ಮುಹಮ್ಮದ್ ಶಾರೂಕ್ (೨೬), ಬೆಂಗಳೂರು ಜೆಎಚ್‌ಬಿಸಿಎಸ್ ಲೇಔಟ್‌ನ ಸಯ್ಯದ್ ಹೈದರಲಿ (೨೯), ಬೆಂಗಳೂರು ಜೆಪಿ ನಗರದ ಆಸಿಫ್ ಅಲಿ (೨೮), ಮುಂಬೈ ಮೂಲದ ಶೇಖ್ ಸಾಜಿದ್ ಹುಸೇನ್ (೪೯), ಅಬ್ದುಲ್ಲಾ ಶೇಖ್ (೨೨), ಶಾಬಾಸ್ ಹುಸೇನ್ (೪೯), ಥಾಣೆಯ ಮುಶಾಹಿದ್ ಅನ್ಸಾರಿ (೩೮), ಮುಸ್ತಾಕ್ ಖುರೇಷಿ (೪೨), ಮುಹಮ್ಮದ್ ಮಹಝ್(೨೦) ಮತ್ತು ಮುಹಮ್ಮದ್ ಆದಿಲ್(೨೫) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಲ್ಲಿ ಮಾಜಿ ಶಾಸಕರೊಬ್ಬರ ಮಾಜಿ ಕಾರು ಚಾಲಕನೂ ಸೇರಿದ್ದಾನೆ ಎಂದು ತಿಳಿಸಿದ್ದಾರೆ. ಆರೋಪಿಗಳಿಂದ ಎರಡು ಕಾರು, ಐದು ತಲವಾರುಗಳು, ೧೦ ಮೊಬೈಲ್ ಫೋನ್ ಗಳು ಹಾಗೂ ದರೋಡೆ ಮಾಡಲಾದ ೪೪೦ ಗ್ರಾಂ ಚಿನ್ನದಲ್ಲಿ ೩೦೦ ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಆರೋಪಿಗಳ ಪೈಕಿ ಅಬ್ದುಲ್ ಸಲಾಂ ವಿರುದ್ಧ ಪಣಂಬೂರು ಠಾಣೆಯಲ್ಲಿ ಹಲ್ಲೆ, ಜೀವ ಬೆದರಿಕೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ, ದರೋಡೆ ಪ್ರಕರಣ, ಬಜ್ಪೆ ಠಾಣೆಯಲ್ಲಿ ಹಲ್ಲೆ, ಬರ್ಕೆ ಠಾಣೆಯಲ್ಲಿ ಜೈಲಿನಲ್ಲಿದ್ದ ಸಮಯ ಹೊಡೆದಾಟ, ಮೂಡಬಿದ್ರೆ ಠಾಣೆಯಲ್ಲಿ ಕೊಲೆ ಯತ್ನ ಸೇರಿ ೧೦ ಪ್ರಕರಣಗಳು ದಾಖಲಾಗಿದ್ದು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಮೇ ತಿಂಗಳ ಮೊದಲ ವಾರದಲ್ಲಿ ಮುಂಬೈಯ ರಹ್ಮಾನ್ ಶೇಖ್ ಎಂಬವರು ಅವರ ಸಂಬಂಧಿಕರಾದ ಬೆಂಗಳೂರಿನ ಹೈದರಲಿ ಎಂಬವರಿಗೆ ನೀಡುವಂತೆ ಹೇಳಿ ಮೂಡಬಿದ್ರೆ ನಿವಾಸಿ ವಕಾರ್ ಯೂನುಸ್ ಎಂಬವರ ಮೂಲಕ ೪೪೦ ಗ್ರಾಂ ಚಿನ್ನದ ಪಾರ್ಸೆಲ್ ಕಳುಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಕಾರ್ ಯೂನುಸ್ ಸ್ನೇಹಿತ, ಬೆಳುವಾಯಿ ನಿವಾಸಿ ಮಹಝ್ ಆತನನ್ನು ನೇರವಾಗಿ ಮೂಡಬಿದ್ರೆಯ ಬೆಳುವಾಯಿಗೆ ಬರುವಂತೆ ತಿಳಿಸಿದ್ದ. ಅದರಂತೆ ಮೇ ೬ರಂದು ಮಹಝ್ ಉಪ್ಪಳದ ಆದಿಲ್ ಹಾಗೂ ಆತನ ಇತರ ಸ್ನೇಹಿತರು ವಕಾರ್ ಯೂನುಸ್‌ನನ್ನು ಮೂಡುಬಿದಿರೆಯ ಪುಚ್ಚೆಮೊಗರು ಎಂಬಲ್ಲಿ ಭೇಟಿಯಾಗಿದ್ದು, ಅಲ್ಲಿಂದ ಯೂನುಸ್ ರನ್ನು ತಾವು ಬಂದಿದ್ದ ಕಾರಿನಲ್ಲಿ ಅಪಹರಿಸಿ ಕಾಸರಗೋಡು ಜಿಲ್ಲೆಯ ಉಪ್ಪಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಯೂನುಸ್ ರಿಂದ ಚಿನ್ನವನ್ನು ದರೋಡೆ ಮಾಡಿದ್ದಾರೆ. ಈ ನಡುವೆ ಬೆಂಗಳೂರಿನ ಹೈದರಲಿಗೆ ಪಾರ್ಸೆಲ್ ತಲುಪದೆ ಇದ್ದಾಗ ರಹ್ಮಾನ್ ಶೇಖ್ ಅವರು ವಕಾರ್ ಯೂನಸ್‌ನನ್ನು ಪ್ರಶ್ನಿಸಿದಾಗ ಆತ ದರೋಡೆ ನಡೆದಿರುವ ಬಗ್ಗೆ ತಿಳಿಸಿದ್ದ. ಈ ನಡುವೆ ಚಿನ್ನ ವಾಪಸ್ ನೀಡುವಂತೆ ರಹ್ಮಾನ್ ಶೇಖ್ ಹಾಗೂ ಇತರರು ಪಟ್ಟೋಡಿ ಸಲಾಂ ಮೂಲಕ ವಕಾರ್‌ಗೆ ಬೆದರಿಕೆ ಹಾಕಿಸಿದ್ದಾರೆ. ಈ ಬಗ್ಗೆ ವಕಾರ್ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಮೇ ೨೧ರಂದು ದರೋಡೆ ಪ್ರಕರಣ ದಾಖಲಿಸಿದ್ದರು. ಇದರಂತೆ ಸಿಸಿಬಿ ಹಾಗೂ ಮೂಡುಬಿದಿರೆ ಪೊಲಸರು ಜಂಟಿ ಕಾರ್ಯಾಚರಣೆ ನಡೆಸಿ ಉಪ್ಪಳದ ಕುಖ್ಯಾತ ಕ್ರಿಮಿನಲ್ ದಿವಂಗತ ಕಾಲಿಯಾ ರಫೀಕ್ ಎಂಬಾತನ ಮಗನಾದ ಕಾಲಿಯಾ ಸುಹೇಲ್ ನ ಗ್ಯಾಂಗ್ ಸಹಚರರಾದ ಮೂಡಬಿದ್ರೆಯ ಬೆಳುವಾಯಿಯ ಮುಹಮ್ಮದ್ ಮಹಝ್ (೨೦) ಹಾಗೂ ಕಾಸರಗೋಡು ಉಪ್ಪಳದ ಮುಹಮ್ಮದ್ ಆದಿಲ್ (೨೫)ರನ್ನು ಮೇ ೨೨ರಂದು ಬಂಧಿಸಿದ್ದರು. ಆರೋಪಿಗಳು ಕಾಂಞಗಾಡ್ ಎಂಬಲ್ಲಿನ ಜುವೆಲ್ಲರಿಗೆ ಮಾರಿದ್ದ ೩೦೦ ಗ್ರಾಂ (೧೩,೮೬,೦೦೦ ರೂ. ಮೌಲ್ಯ) ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ನಡುವೆ ತಮ್ಮ ೪೪೦ ಗ್ರಾಂ ಚಿನ್ನವನ್ನು ವಸೂಲಿ ಮಾಡಿಕೊಳ್ಳಲು ಮುಂಬೈಯ ಅಬ್ದುಲ್ ರಹ್ಮಾನ್ ಶೇಖ್ ಜೋಕಟ್ಟೆಯ ರೌಡಿ ಶೀಟರ್ ಅಬ್ದುಲ್ ಸಲಾಂ ಯಾನೆ ಪಟೋಡಿ ಸಲಾಂಗೆ ೫ ಲಕ್ಷ ರೂ. ಸುಪಾರಿ ನೀಡಿದ್ದರು. ಚಿನ್ನ ವಸೂಲಿ ಮಾಡಲು ಸಾಧ್ಯವಾಗದಿದ್ದರೆ ಅಪಹರಣಗೈದು, ದರೋಡೆ ಮಾಡಿದವರನ್ನು ಕೊಲೆ ಮಾಡಲು ಸುಪಾರಿ ಪಡೆದ ಅಬ್ದುಲ್ ಸಲಾಂ ತನ್ನ ತಮ್ಮನೊಂದಿಗೆ ಹಾಗೂ ಮುಂಬೈಯಿಂದ ಬಂದ ರೆಹಮಾನ್ ಶೇಖ್‌ನ ತಮ್ಮ ಅಬ್ದುಲ್ ಶೇಖ್ ಸೇರಿದಂತೆ ನಾಲ್ವರು ರೌಡಿಗಳು, ಚಿನ್ನವನ್ನು ಪಡೆದುಕೊಳ್ಳಬೇಕಾಗಿದ್ದ ಹೈದರಲಿ ಸೇರಿದಂತೆ ಇತರ ಮೂವರ ಜತೆ ಸೇರಿ ಮಾರಕಾಯುಧಗಳೊಂದಿಗೆ ಬೆಳುವಾಯಿಯ ಮಹಝ್‌ನ ಮನೆಯ ಬಳಿ ಹೊಂಚು ಹಾಕುತ್ತಿದ್ದರು. ಈ ಬಗ್ಗೆ  ಮಾಹಿತಿ ಪಡೆದ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ವಿವರಿಸಿದರು. ಅಪಹರಣ ಹಾಗೂ ದರೋಡೆ ಕೃತ್ಯಕ್ಕೆ ಬಳಸಲಾದ ಇನ್ನೋವಾ ಕಾರು ಧರ್ಮಗುರುವೊಬ್ಬರ ಪುತ್ರನ ಹೆಸರಿನಲ್ಲಿದ್ದು, ಅವರ ಯಾವುದೇ ಪಾತ್ರ ಈ ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು. ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ನಟರಾಜ್ ಹಾಗೂ ಇತರರು ಉಪಸ್ಥಿತರಿದ್ದರು.