ವ್ಯಕ್ತಿಯಿಂದ ರಸ್ತೆಗೆ ತಡೆಗೋಡೆ – ಪಂಚಾಯತ್‌ನಿಂದ ತೆರವು

ಮೂಡುಬಿದಿರೆ,ಏ.೨- ಸಾರ್ವಜನಿಕರು ಹೋಗುವ ರಸ್ತೆಯನ್ನು ವ್ಯಕ್ತಿಯೊಬ್ಬರು ಖಾಸಗಿ ಜಾಗವೆಂಬ ನೆಪವೊಡ್ಡಿ ತಡೆಗೋಡೆ ಕಟ್ಟಿ ಬಂದ್ ಮಾಡಿದ್ದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಂಚಾಯತ್ ಪಿಡಿಒ ಉಗ್ಗಪ್ಪ ಮೂಲ್ಯ ಅವರು ಗುರುವಾರ ತಡೆಗೋಡೆಯನ್ನು ತೆರವುಗೊಳಿಸಿದ ಘಟನೆ ಕಲ್ಲಮುಂಡ್ಕೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಕೊಟ್ರಪಾಡಿ ಎಂಬಲ್ಲಿ ಕಾಪಿಕಾಡು ಗಾಂದೊಟ್ಟು ತೊರ್ಪು ಎಂಬಲ್ಲಿಗೆ ಹೋಗುವ ರಸ್ತೆಯನ್ನು ಸಾರ್ವಜನಿಕರು ಸುಮಾರು ೮೦ ವರ್ಷಗಳಿಂದ ಬಳಸುತ್ತಿದ್ದರು. ಈ ರಸ್ತೆಯನ್ನು ಇದೀಗ ವ್ಯಕ್ತಿಯೊಬ್ಬರು ಬಂದ್ ಮಾಡಿದ್ದರಿಂದ ಜನಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಕುರಿತು ಸ್ಥಳೀಯರು ಪಂಚಾಯತ್‌ಗೆ ದೂರು ನೀಡಿದ್ದು ಸ್ಥಳ ಪರಿಶೀಲನೆ ನಡೆಸಿ ತಡೆಗೋಡೆಯನ್ನು ತೆರವುಗೊಳಿಸಿದರು. ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.