ವ್ಯಕ್ತಿಯಲ್ಲಿ ಬದಲಾದ ಲಕ್ಷಣಗಳನ್ನು ಕಂಡುಹಿಡಿದಲ್ಲಿ ಆತ್ಮಹತ್ಯೆ ತಡೆಯಲು ಸಾಧ್ಯ : ನ್ಯಾ. ಎಸ್.ಕೆ ಕನಕಟ್ಟೆ

ಬೀದರ, ಸೆ.13: ಆತ್ಮಹತ್ಯೆ ತಡೆಯಲು ಮೊದಲು ವ್ಯಕ್ತಿಯಲ್ಲಿನ ಲಕ್ಷಣಗಳನ್ನು ಕಂಡು ಹಿಡಿದು, ಅವರ ಮನ ನೋವಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣದಲ್ಲಿ ಮನನೊಂದವರು ಹಾಗೂ ಹುದ್ದೆಯಲ್ಲಿ ಮನನೊಂದವರು ಆತ್ಮಹತ್ಯೆಗೆ ಶರಣಾಗುವುದು ಮೂಲ ಕಾರಣವಿರುವುದಿಲ್ಲ. ನಾವು ನಮ್ಮ ಹತ್ತಿರ ಇರುವ ವಿಷಯವನ್ನು ಬೇರೊಬ್ಬರಿಗೆ ಹಂಚಿಕೊಳ್ಳುವುದರಿಂದ ಒಳ್ಳೆಯ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಓದಿನಲ್ಲಿ ಮಕ್ಕಳು ಕಡಿಮೆ ಓದಿದ್ದೇನೆ ಎಂದು ಕುಗ್ಗದೇ ಹೆಚ್ಚು ಓದಿ, ಒಳ್ಳೆ ಹುದ್ದೆ ಇದೆ ಎಂದು ಹಿಗ್ಗದೇ, ಸಮವಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮಪ್ಪಾ ಕೆ. ಕನಕಟ್ಟೆ ಹೇಳಿದರು. ಅವರು ಸೋಮವಾರ ಬೀದರ ನಗರದ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೆ.ಆರ್.ಇ.ಸಂಸ್ಥೆ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ್ ಮಾತನಾಡಿ, ಸಮಸ್ಯೆಗಳು ಬಂದದ್ದನ್ನು ಧೈರ್ಯದಿಂದ ಎದುರಿಸಬೇಕು, ಆತ್ಮಹತ್ಯೆಗೆ ಒಳಗಾಗುವುದು ಒಂದೇ ಪರಿಹಾರವಲ್ಲ, ಅದರ ಮೊದಲು ಸೂಕ್ಷ?? ಆಪ್ತಸಮಾಲೋಚಕರು ಮತ್ತು ಮನೋವೈದ್ಯರ ಸಲಹೆಯನ್ನು ಪಡೆಯುವಂತೆ ಸಲಹೆ ನೀಡಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ ಪಾಟೀಲ್ ಮಾತನಾಡಿ, ಆತ್ಮಹತ್ಯೆಗೆ ಒಳಗಾಗುವ ಮೊದಲು ವ್ಯಕ್ತಿಯ ವರ್ತನೆಯನ್ನು ಗಮನಿಸಬೇಕು. ನಿದ್ದೆ ಬರದೆ ಇರುವುದು, ಅತೀಯಾದ ಸಿಟ್ಟು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಇರುವುದು, ಒಂಟಿಯಾಗಿರುವುದು ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ, ಮನೋವೈದ್ಯರ ಹಾಗೂ ಆಪ್ತಸಮಾಲೋಚಕರ ಸಲಹೆಯನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಹಿರಿಯ ವಕೀಲ ಬಿ.ಎಸ್. ಪಾಟೀಲ್ ಮಾತನಾಡಿ, ಮಗು ಹುಟ್ಟಿನಿಂದ ಸಾಯುವವರೆಗೆ ಪ್ರತಿಯೊಂದು ಕಾಯ್ದೆಗಳು ಇರುತ್ತವೆ, ಆದರೆ ನಾವು ಅದನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆ ವಿನಹ ಕೆಟ್ಟು ಕೆಲಸಗಳನ್ನು ಮಾಡಿ, ಮಾನಸಿಕ ಆರೋಗ್ಯವನ್ನು ಕೆಡಿಸಿಕೊಂಡು, ಕಾಯ್ದೆಗಳಿಗೆ ಒಳಗಾಗಬಾರದು ಎಂದು ಹೇಳಿದರು. ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಅನೀಲಕುಮಾರ ಚಿಕ್ಕಮಣನೂರ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕ ಆರೋಗ್ಯವನ್ನು ಪಡೆಯಲು ಮುಜುಗರ ಪಡದೆ ಸಾಧ್ಯವಾದಲ್ಲಿ 14416 ಟೆಲಿ ಮಾನಸಾ ಟೊಲ್‍ಫ್ರೀ ನಂಬರ್‍ಗೆ ಕರೆ ಮಾಡಿ, ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಹೇಳಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೀದರ ಮನೋವೈದ್ಯ ಡಾ. ಅಮಲ ಶರೀಫ್ ಮಾತನಾಡಿ, ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಅವಶ್ಯಕವಾಗಿದೆ ಎಂದು ಹೇಳಿದರು. ಮಾನಸಿಕ ಆರೋಗ್ಯ ವಿಭಾಗ, ಬ್ರಿಮ್ಸ್ ಆಸ್ಪತ್ರೆ, ಬೀದರ ಮನೋವೈದ್ಯ ಡಾ. ರಾಘವೇಂದ್ರ ವಾಗೋಲೆ ರವರು ಆತ್ಮಹತ್ಯೆ ತಡೆಗಟ್ಟುವ ಕುರಿತು ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋಶಾಸ್ತ್ರಜ್ಞ ಮಲ್ಲಿಕಾರ್ಜುನ ಗುಡ್ಡೆ, ಆಪ್ತ ಸಮಾಲೋಚಕಿ ರೇಣುಕಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶಾಮರಾವ, ರಮೇಶ, ಅಬ್ದುಲ ಹೈ, ಇಮಾನುವೇಲ್, ಜ್ಯೋತಿ, ಬ್ರಹ್ಮರಾಂಭದೇವಿ, ಸಾಮಾಜಿಕ ಕಾರ್ಯಕರ್ತರಾದ ಪರಶುರಾಮ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.