ವ್ಯಕ್ತಿಯನ್ನು ಪರಿವರ್ತನೆ ಮಾಡುವುದೇ ಶಿಕ್ಷಣ

ಧಾರವಾಡ, ಮಾ 11: ಶಿಕ್ಷಣ ಮತ್ತು ನೈತಿಕತೆ ಒಂದಕ್ಕೊಂದು ಹಾಸುಹೊಕ್ಕಾಗಿ ಇರುವಂತವುಗಳು. ಶಿಕ್ಷಣ ಮತ್ತು ನೈತಿಕತೆ ಯಾವಾಗ ಬೇರೆ ಬೇರೆ ದಾರಿಯನ್ನು ಹಿಡಿದವೋ ಆವಾಗ ಎರಡಕ್ಕೂ ಅಸ್ತಿತ್ವದ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಾ ನಡೆಯಿತು ಎಂದು ಕರ್ನಾಟಕ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಜಿ.ಸಿ.ತಲ್ಲೂರ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಎಸ್.ಜಿ. ನಾಡಗೀರ ಸ್ಮರಣಾರ್ಥದತ್ತಿ ನಿಮಿತ್ತ ಭಾರತೀಯ ಶಿಕ್ಷಣ ಹಾಗೂ ನೈತಿಕತೆ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಜ್ಞಾನ, ವಿವೇಕ, ದರ್ಶನ ಭಾರತೀಯರ ಸಾಧನೆಯ ಗುರಿಗಳಾಗಿದ್ದವು. ಆತ್ಮ ಸಾಕ್ಷಾತ್ಕಾರ, ಆತ್ಮ ವಿಮೋಚನೆಯ ದೃಷ್ಟಿಯಿಂದ ಶಿಕ್ಷಣದ ವ್ಯವಸ್ಥೆ ಇತ್ತು. ಅಸಂಖ್ಯಾತ ವಿದ್ವಾಂಸರಿಗೆ ಆಶ್ರಯತಾಣವಾಗಿದ್ದು ಭಾರತ. ಆದರ್ಶ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುವುದು ಜಾಗತಿಕ ಮಟ್ಟದಲ್ಲಿ ಭಾರತೀಯ ಶೈಕ್ಷಣಿಕ ಮೌಲ್ಯಗಳನ್ನು ಬಿತ್ತರಿಸುವುದು ಭಾರತೀಯ ಶಿಕ್ಷಣ ನೀತಿಯಾಗಿತ್ತು. ವ್ಯಕ್ತಿಯನ್ನು ಪರಿವರ್ತನೆ ಮಾಡುವುದೇ ಶಿಕ್ಷಣ. ನೈತಿಕತೆಯನ್ನು ಕಲಿಸದ ಶಿಕ್ಷಣ ಶಿಕ್ಷಣವೇ ಅಲ್ಲ.
ನಲಂದಾ ವಿಶ್ವವಿದ್ಯಾಲಯವು ನೈತಿಕ ಶಿಕ್ಷಣದ ಕೇಂದ್ರವಾಗಿತ್ತು. ಹಾಗಾಗಿ ಬೇರೆ ಬೇರೆ ದೇಶಗಳಿಂದಲೂ ಶಿಕ್ಷಣವನ್ನು ಪಡೆಯುವುದಕ್ಕಾಗಿ ಆಗಮಿಸುತ್ತಿದ್ದರು. ಥಾಮಸ್ ನಿಕಾಲೆ, ಕೊಠಾರೆ ವರದಿಗಳಲ್ಲಿ ಶೈಕ್ಷಣಿಕ ಪ್ರಪಂಚದಲ್ಲಿ ಮನುಷ್ಯನ ಜೀವನಕ್ಕೆ ಬೇಕಾದ ತನ್ನ ಬದುಕನ್ನು ಸುಸಜ್ಜಿತವಾಗಿ ಕಟ್ಟಿಕೊಳ್ಳಲು ಬೇಕಾದ ನೈತಿಕ ಮೌಲ್ಯಗಳನ್ನು ಆ ವ್ಯವಸ್ಥೆಯಲ್ಲಿ ಕಟ್ಟಿಕೊಡಲಾಗಿದೆ. ನಾವು ನಾವಾಗಿ ಮುಂದುವರೆಯಬೇಕಾದರೆ ನಾವು ನಾವಾಗಿರಬೇಕು. ಅಂದಾಗ ಮೌಲ್ಯ, ನಂಬಿಕೆ, ವಿಶ್ವಾಸ ಸಾಧ್ಯವಾಗುತ್ತದೆ.ಸತ್ಯವನ್ನು ಬಿಡಬಾರದು, ಧರ್ಮ ಮಾರ್ಗದಲ್ಲಿ ನಡೆಯಬೇಕು. ವಿನಯವಂತಿಕೆಯಿಂದ ಇರಬೇಕು ಇವು ಆದರ್ಶ ವ್ಯಕ್ತಿಯ ಆದರ್ಶ ಮೌಲ್ಯಗಳಾಗಿವೆ ಎಂದು ಜಿ.ಸಿ.ತಲ್ಲೂರ ಹೇಳಿದರು.
ಅಧ್ಯಕ್ಷತೆ ವಹಿಸಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿವೃತ್ತ ಮುಖ್ಯ ಅಭಿಯಂತರ ಅರುಣ ಎಸ್. ನಾಡಗೀರ ಮಾತನಾಡಿ, ಒಂದು ಕಾಲ ಘಟ್ಟದಲ್ಲಿದ್ದ ಜನರಲ್ಲಿ ಮೌಲ್ಯಗಳೇ ಆದರ್ಶವಾಗಿದ್ದವು. ಆ ನಿಟ್ಟಿನಲ್ಲಿ ಜನರ ವಿಶ್ವಾಸ, ಪ್ರೀತಿಗೆ ಪಾತ್ರರಾಗಿರುತ್ತಿದ್ದರು. ಇಂದು ಮೌಲ್ಯಗಳ ಕೊರತೆ ಎದ್ದುಕಾಣುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಶಾಮಸುಂದರ ಬಿದರಕುಂದಿ, ಹರ್ಷ ಡಂಬಳ, ನಿಂಗಣ್ಣ ಕುಂಟಿ, ಶಶಿಧರ ತೋಡಕರ, ರಾಜಪುರೋಹಿತ, ಎಂ.ಎಂ.ಚಿಕ್ಕಮಠ, ಡಾ.ಗುರುನಾಥ ಹೂಗಾರ, ಮೋಹನ ಸಿದ್ಧಾಂತಿ, ಎಂ.ಎಸ್. ನರೇಗಲ್, ಎಸ್.ಎಸ್. ಆವೋಜಿ, ಕೆ.ಇ. ಬೋರ್ಡನ ಸಿಬ್ಬಂದಿಗಳು ಸೇರಿದಂತೆ ಮುಂತಾದವರಿದ್ದರು.