ವ್ಯಕ್ತಿತ್ವ ಶುದ್ಧಿಯೇ ಅಧ್ಯಾತ್ಮ: ಡಾ.ಗುರುಬಸಪ್ಪ

ಕಲಬುರಗಿ.ಏ.10: ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ 12ನೇ ಶತಮಾನದ ವಚನ ಚಳವಳಿ ನ: ಭೂತೋ ನ: ಭವಿಷತ್. ಇಂತಹ ಅಭೂತಪೂರ್ವ ಕ್ರಾಂತಿಯ ನೇತಾರ ಬಸವಣ್ಣನವರ ಹೆಗಲಿಗೆ ಹೆಗಲು ಕೊಟ್ಟವರು ಅಲ್ಲಮಪ್ರಭುಗಳು. ಯೋಗ್ಯತೆ ದೃಷ್ಟಿಯಿಂದ ಅಲ್ಲಮರು ಅಲೌಕಿಕ ವಿಚಾರಗಳನ್ನು ತಿಳಿಸಿದ್ದಾರೆ ಎಂದು ಸರ್ಕಾರಿ ಸ್ವಾಯತ್ತ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಡಾ. ಟಿ. ಆರ್. ಗುರುಬಸಪ್ಪ ಎಂದು ತಿಳಿಸಿದರು.
ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಲಿಂ. ಚನ್ನಬಸಪ್ಪಗೌಡ ಮಲ್ಲೇಶಪ್ಪಗೌಡ ಮಾಲಿಪಾಟೀಲ ರಬನಳ್ಳಿ ಸ್ಮರಣಾರ್ಥ ಹಮ್ಮಿಕೊಂಡಿದ್ದ 749ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ ‘ಅರಿತೆನೆಂಬುದು ತಾ ಬಯಲು’ ವಿಷಯ ಕುರಿತು ಅನುಭಾವ ನೀಡಿದರು.
ಆಧ್ಯಾತ್ಮಿಕ ಅನುಭವ, ಯೋಗಿಕ ನಿಲುವುಗಳನ್ನು ಬೆಡಗಿನ ವಚನಗಳ ಮೂಲಕ ಅಭಿವ್ಯಕ್ತಿಸಿದ ಅಲ್ಲಪ್ರಭು ಸಿದ್ಧೇಶ್ವರ ಶ್ರೀಗಳು ಹೇಳುವಂತೆ ಜಗತ್ಪಾವನಮೂರ್ತಿಗಳು. ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳು ಲಿಂಗಾಯತ ಧರ್ಮದ ಆವರಣಗಳು, ರಕ್ಷಾಕವಚಗಳು ಎಂದು ತಿಳಿಸಿದರು.
ಷಟಸ್ಥಲದ ಐಕ್ಯಸ್ಥಲದಲ್ಲಿ ಬರುವ ಅರಿತೆನೆಂಬುದು ತಾ ಬಯಲು ಎನ್ನುವ ವಚನದ ಸಾಲು ವ್ಯಕ್ತಿ ಸಾಧಿಸಬೇಕಾದ ಆದರ್ಶಗಳಾಗಿವೆ. ಸಾವಧಾನವಾಗಿ ನಡೆಯುವ ಪ್ರಕ್ರಿಯೆಗಳಾದ ಷಟಸ್ಥಲಗಳು ಮನುಷ್ಯ ಬದುಕಿನ ಸಾರ್ಥಕತೆಯನ್ನು, ದಾಟಬೇಕಾದ ಆರ್ಧಯಾತ್ಮಕ ಹಂತಗಳುನ್ನು ತಿಳಿಸಿಕೊಡುತ್ತವೆ. ಐಕ್ಯದಲ್ಲಿ ನೆಲೆಗೊಳ್ಳುವ, ವಿರಮಿಸುವ ಪ್ರಕ್ರಿಯೆಯೇ ಐಕ್ಯಸ್ಥಲ ಎಂದು ಅವರು ವಿವರಿಸಿದರು.

ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾಸೋಹಿಗಳಾದ ಮಲ್ಲಮ್ಮ ಚನ್ನಬಸಪ್ಪ ಮಾಲಿಪಾಟೀಲ, ರಮೇಶ ಮಾಲಿಪಾಟೀಲ ವೇದಿಕೆಯಲ್ಲಿದ್ದರು. ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ಬಸವ ಸಮಿತಿ ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಡಾ. ಕೆ.ಎಸ್. ವಾಲಿ, ಡಾ. ಎಸ್.ಎಸ್. ಗುಬ್ಬಿ, ಎಸ್.ವಿ. ಹತ್ತಿ, ಪ್ರೊ. ಎಸ್.ಎಲ್. ಪಾಟೀಲ ಇತರರಿದ್ದರು. ಶಂಕರೌಡ ಮಾಲಿಪಾಟೀಲ ಸ್ವಾಗತಿಸಿದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು.

ಸಮಾಜಮುಖಿ ಕಾರ್ಯಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರಬನಳ್ಳಿಯ ಚನ್ನಬಸಪ್ಪಗೌಡ ಮಾಲಿಪಾಟೀಲ ಅವರು ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ತಾವು ಸರ್ಕಾರಿ ಸೇವೆಯಲ್ಲಿರುವಾಗಲೇ ಬಡ ಬಗ್ಗರ ಮದುವೆಗೆ ಸಹಾಯ-ಸಹಕಾರ ನೀಡಿರುತ್ತಾರೆ. ತಮ್ಮ ತಂಬಾಕು ದೊಡ್ಡಿಯ ಹೊಲದಲ್ಲಿ ಸರ್ಕಾರದ ಆಶ್ರಯ ಮನೆ ಕಟ್ಟಲು ಅವಕಾಶ ಮಾಡಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.